ಹೈಜಾಕೇಶ್ವರ

ವಿದೇಶದಲ್ಲೊಂದು ಗಂಡಂದಿರು ತಮ್ಮ ಹೆಂಡತಿಯನ್ನು ಈ ಮಟ್ಟಕ್ಕೆ ಇಷ್ಟಪಡುತ್ತಾರಾ ಎಂದು ಅನುಮಾನ ಮೂಡುವಂತಹ ಘಟನೆ ನಡೆದಿದೆ.  ಬಿಟ್ಟು ಹೋದ ತನ್ನ ಪತ್ನಿಗಾಗಿ ಮಾನ ಬಿಟ್ಟು ವಿಮಾನ ಹೈಜಾಕ್ ಮಾಡಿದ್ದಾನೆ ಒಬ್ಬ ಮಹಾಶಯ.  ಆ ಮೂಲಕ ತನ್ನ ಪ್ರೀತಿ ಎಷ್ಟು ಎತ್ತರವೆಂದು ಜಗತ್ತಿಗೇ ಮನವರಿಕೆ ಮಾಡಿಕೊಟ್ಟಿದ್ದಾನೆ.  ಕೈರೋಗೆ ಹೊರಟಿದ್ದ ಏರ್‍ಬಸ್ ಅಪಹರಿಸಿ ತನ್ನ ಜೀರೋ ಸೈಜ್ ಪತ್ನಿ ಬೇಕೆಂದು ಹಠ ಹಿಡಿದಿದ್ದಾನೆ.  ತನ್ನ ಈ ಕೆಲಸಕ್ಕೆ ಯಾರು ಜಾಕ್ ಎತ್ತಿದ್ರೋ ಏನೋ ಅಂತೂ ಯಶಸ್ವಿಯಾಗಿ ವಿಮಾನ ಹೈಜಾಕ್ ಮಾಡಿದ್ದಾನೆ.  ದಿಕ್ಕುತಪ್ಪಿದ ಪತಿಯಿಂದಾಗಿ ಏರ್‍ಬಸ್ ಕೂಡ ದಿಕ್ಕು ತಪ್ಪಿದೆ.  ನೀರಿನ ಬಾಟಲಿಯೊಂದಿಗೆ ಜೀವವನ್ನೂ ಕೈಯಲ್ಲಿಡಿದುಕೊಂಡ ಪ್ರಯಾಣಿಕರಿಗೆ ಈ ಏರ್‍ಬಸ್ ಎ-320 ಗಿಂತ `ಟಿಕ್‍ಟ್ವಂಟಿ’ಯೇ ವಾಸಿಯೆನಿಸಿರಬೇಕು.  ಇನ್ನು ಪತ್ನಿಯಿಲ್ಲದೆ ಮನೆಯಲ್ಲೇ ಬಿದ್ದಿರೋ ‘ಹೋಮಿಯೋಪತಿ’ಗೆ ಬೆಲೆ ಇಲ್ಲವೆಂದು ಆತನಿಗೆ ತಡವಾಗಿ ಗೊತ್ತಾಗಿದೆ.  ಅಂತೂ ತನ್ನ ಮಾನ ಹೋದ್ರೂ ಮಾನಿನಿ ಬೇಕೇಬೇಕೆಂಬುದು ಹೈಜಾಕೇಶ್ವರನ ಹಠವಾಗಿದೆ.  ಆ ಮೂಲಕ ಈಜಿಪ್ಟ್‍ನಲ್ಲಿ `ಮಮ್ಮಿ’ಗಳಿಗೇ ಯಾವತ್ತು ಬೆಲೆ ಎಂದು ಮತ್ತೊಮ್ಮೆ ಮನದಟ್ಟಾಗಿದೆ.  ಹೆಂಡತಿ ಸೈಪ್ರಸ್ ಮೂಲದವಳಂತೆ.  ಆಕೆಗೇನು ಸಿಟ್ಟಿತ್ತೋ ಗಂಡನನ್ನು ದೂರವಿಟ್ಟಿದ್ದಾಳೆ.   ತನ್ನ ಪತಿ ಈ ರೀತಿ ಇಂಪ್ರೆಸ್ ಮಾಡುತ್ತಾನೆಂದು ಸೈಪ್ರಸ್ ಮೂಲದ ಪತ್ನಿ ಊಹಿಸಿರಲಿಕ್ಕಿಲ್ಲವೇನೋ ? ಗಂಡನ ಅವಾಂತರ ಕಂಡು ಬೆಚ್ಚಿದ್ದಾಳೆ.  ಕೊನೆಗೂ ತನ್ನ ಹಳೆ ಗಂಡನ ಪಾದವೇ ಗತಿಯೆಂದು ತನ್ನ ಮಗುವಿನೊಂದಿಗೆ ಆತನಿಗೆ ದರ್ಶನ ನೀಡಿ ಸುಖಾಂತ್ಯವಾದರೂ ತನ್ನ ಈ ಮಹತ್ಸಾಧನೆಗೆ ಪೋಲೀಸರ ಆತಿಥ್ಯ ದೊರಕಿದೆ.  ಮತ್ತೆ ಆತನಿಗೆ ತನ್ನ ಹೆಂಡತಿ ದೂರದರ್ಶನವೇ ಆಗಿದ್ದಾಳೆ.  ನಮ್ಮಲ್ಲಿ ಈ ರೀತಿ ಆಗಿ ಹೆಂಡತಿ ತವರಿಗೆ ವಾಪಸ್ ಹೋಗಿದ್ದರೆ ನಾವೇನೂ ಮುನಿಸಿಕೊಂಡು ಮುನಿಗಳಾಗುತ್ತಿರಲಿಲ್ಲ, ಸ್ವಾತಂತ್ರ್ಯ ಸಿಕ್ಕಿತೆಂದು ಕುಣಿದು ಕುಪ್ಪಳಿಸುತ್ತಾ ಯಾವತ್ತೂ “ಮಮ್ಮಿ ರಿಟನ್ರ್ಸ್” ಆಗಬಾರದೆಂದು ದೇವರಲ್ಲಿ ಮೊರೆಯಿಡುತ್ತಿದ್ದೆವೆಂದು ನೊಂದ ಗಂಡಂದಿರ ಅಳಲು.

-ಎಲ್.ವಿ. ಕುಮಾರಸ್ವಾಮಿ

Leave a Comment