ರಾಂಗ್ ನಂಬರ್ – 1

ಮಿಸ್ಡ್ ಕಾಲ್ ಬಂತು
ಆ ಕಡೆಯಿಂದ ಯಾರು ಅಂದೆ
ನೀವ್ಯಾರು ಮಾತಾಡೋದು ? ಅಂದ್ಲು
ಈ ಕಡೆಯಿಂದ ನಾನು ಆ ಕಡೆಯಿಂದ ನೀವು ಅಂದೆ
ಸಾರಿ… ಇದು ರಾಂಗ್‍ನಂಬರ್ ಅಂದ್ಲು
ಪರ್ವಾಗಿಲ್ಲ ಮಾತಾಡೋದು ಸ್ಯಾರಿ ತಾನೆ ಅಂದೆ
ಸ್ಯಾರಿ ಅಲ್ಲಾರೀ ಚೂಡಿದಾರ ಅಂದ್ಲು
ನೀವು ಚೂಡಿದಾರ ಆದ್ರೆ ನಾನು ಉಡ್‍ದಾರ ಅಂದೆ
ತುಂಬಾ ಮಾತಾಡ್ತೀರಲ್ಲ್ರೀ ಅಂದ್ಲು
ಆಲ್ ಮೊಬೈಲ್‍ಗೆ ಫ್ರೀ ಅಂದೆ
ನಿಮ್ ಮಾತಿಗೆ ಬೆಲೆನೇ ಇಲ್ವಲ್ರೀ ಅಂದ್ಲು
ನನ್ ಮಾತಿಗೆ ಬೆಲೆ ಕಟ್ಟಕಾಗಲ್ಲ ಅಂದೆ
ಹುಡುಗಿಯೊಡನೆ ಸಿಕ್ಕಾಪಟ್ಟೆ ಮಾತಾಡ್ತೀರಲ್ಲಾ ನಿಮ್ಮನೇಲಿ ಅಕ್ಕ-ತಂಗಿಯರಿಲ್ವಾ ಅಂದ್ಲು
ಇಲ್ಲಾ ಊರಿಗೋಗಿದಾರೆ ಅಂದೆ
ನಿಮ್ಮ ಹೆಸರೇನ್ರೀ ಅಂದೆ
ಸುಮ ಅಂದ್ಲು
ಮೊಬೈಲಲ್ಲೇ ಸುವಾಸನೆ ಬರ್ತಿದೀಯಲ್ಲಾ ಅಂದೆ
ನಾಯಿ ತರ ಮೂಸೋ ಸ್ವಭಾವ ಬಿಡ್ರೀ ಅಂದ್ಲು
ನನ್ ಹೆಸ್ರು ಕೇಳಲೇ ಇಲ್ವಲ್ಲಾ ಅಂದೆ
ವಾಯ್ಸ್ ಕೇಳ್ತಿದೀನಲ್ಲಾ ಸಾಕು ಅಂದ್ಲು
ಇಬ್ರೂ ಇಷ್ಟೊಂದು ಮಾತಾಡ್ತಿದೀವಿ ಅಂದ್ರೆ ಏನೂ ಅನ್ನಿಸ್ತಿಲ್ವಾ ಅಂದೆ
ಬಲಗಣ್ಣು ಹಾರ್ತಿದೆ ಕೆಟ್ಟ ಮುನ್ಸೂಚನೆ ಇರಬೇಕು ಅಂದ್ಲು
ಕಣ್ಣು ಹಾರಿದ್ರೆ ತಪ್ಪಲ್ಲ ನೀರಿಗೆ ಹಾರಿದ್ರೆ ತಪ್ಪು ಅಂದೆ
ನಿಮ್ ವಾಯ್ಸೇ ಸೂಪರ್ ಇನ್ನು ನೀವು ಹೇಗಿರಬೇಕು ಅಂದೆ
ಖರ್ಚಿಲ್ಲದೆ ಹಲ್ಲು ಕೀಳಿಸೋ ಆಸೆ ಇದೆಯಾ ಅಂದ್ಲು
ಅಂತೂ ನನ್ ಬಾಯ್‍ಗೇ ಬಂದ್ರಲ್ಲಾ ಅಂದೆ
ದೇವಸ್ಥಾನದಲ್ಲೇ ನಿಮಗೆ ಐ ಲವ್‍ಯೂ ಅನ್ನಬೇಕು ಅನ್ಸುತ್ತೆ ಅಂದೆ
ದೇವಸ್ಥಾನವೇ ಯಾಕೆ ಅಂದ್ಲು
ಆಗ ನಿಮ್ಮ ಕಾಲಲ್ಲಿ ಚಪ್ಪಲಿ ಇರೋಲ್ಲ ಅದಕ್ಕೆ ಅಂದೆ
ಕೈಯಲ್ಲಿ ತೆಂಗಿನ ಕಾಯಿ ಇರುತ್ತೆ ಮರೀಬೇಡಿ ಅಂದ್ಲು
ದೇವರೆದ್ರೂ ನನ್ ಆಟ ನಡೆಯಲ್ಲ ಅಂದೆ
ದೇವರ ಆಟ ಬಲ್ಲವರ್ಯಾರು ಅಂದ್ಲು
ಅರೇಂಜ್ ಮ್ಯಾರೇಜ್ ಇಷ್ಟಾನೋ ? ಲವ್ ಮ್ಯಾರೇಜ್ ಇಷ್ಟಾನೋ ? ಅಂದ್ಲು
ಒಂದು ಸಹಜ ಸಾವು, ಇನ್ನೊಂದು ಆತ್ಮಹತ್ಯೆ ಎಂದೆ
ಎಷ್ಟು ದಿನ ಸುಖವಾಗಿರ್ತೀರಿ ಮದುವೆ ಆಗಿ ಅಂದ್ಲು
ಹಲ್ಲಿ ಲೊಚಗುಟ್ಟುತ್ತಿದೆ ಅಂದೆ
ಶಕುನ ನಂಬ್ತೀರೇನ್ರೀ ಅಂದ್ಲು
ಸಮಯ ಬಂದ್ರೆ ಶಕುನೀನೂ ನಂಬ್ತೀನಿ ಅಂದೆ
ಹುಡುಗಿಯರ ಮೇಲೆ ನಂಬಿಕೆ ಇಲ್ವಾ ಅಂದ್ಲು
ಮೇಲಿದೆ ಆದರೆ ಕೆಳಗಿಲ್ಲ ಅಂದೆ
ನಿಮ್ಮನ್ನ ಕೆಲ ವಿಷಯ  ಟೆಸ್ಟ್ ಮಾಡ್ಲಾ ಅಂದ್ಲು
ಟೆಸ್ಟ್-ಒನ್‍ಡೇ-20-20 ನಾದ್ರೂ ಮಾಡಿ ಅಂದೆ
ಇ-ಮೇಲ್ ಐ.ಡಿ ಇದೆಯಾ ಅಂದ್ಲು
ಓಟರ್ ಐ.ಡಿ.ನೇ ಇಲ್ಲಾ ಅಂದೆ
ನಿಮ್ಮತ್ರ ಫೇಸ್‍ಬುಕ್ ಇದೆಯಾ ಅಂದ್ಲು
ನನ್ನತ್ರ ಪಾಸ್‍ಬುಕ್ಕೂ ಇಲ್ಲಾ ಅಂದೆ
ಟ್ವಿಟ್ಟರ್ ಗೊತ್ತಾ ಅಂದ್ಲು
ಕೆಟ್ಟೋರ್ ಗೊತ್ತು ಅಂದೆ
ವೆಬ್‍ಸೈಟ್ ಇದೆಯಾ ಅಂದ್ಲು
ಇರೋ ಸೈಟು ಮಾರಿ ವರ್ಷವಾಯ್ತು ಅಂದೆ
ಯೂಟ್ಯೂಬ್ ಗೊತ್ತಾ ಅಂದ್ಲು
ಸೈಕಲ್ ಟ್ಯೂಬ್ ಗೊತ್ತು ಅಂದೆ
ವಾಟ್ಸಾಪ್ ಗೊತ್ತಾ ಅಂದ್ಲು
ಹೊಗೆಸೊಪ್ ಗೊತ್ತು ಅಂದೆ
ಆಂಟಿ ವೈರಸ್ ಗೊತ್ತಾ ಅಂದ್ಲು
ಆಂಟಿಗಳೆಲ್ಲಾ ವೈರಸ್ ಅಂತ ಗೊತ್ತು ಅಂದೆ
ಹಾರ್ಡ್‍ವೇರ್ ಗೊತ್ತಾ ಅಂದ್ಲು
ಅಂಡರ್‍ವೇರ್ ಗೊತ್ತು ಅಂದೆ
ಮೋಡಮ್ ಗೊತ್ತಾ ಅಂದ್ಲು
ಪಕ್ಕದ್ಮನೆ ಮೇಡಮ್ ಗೊತ್ತು ಅಂದೆ
ಸಿಂಪಲ್ ಮದುವೆ ಒಳ್ಳೇದಲ್ವಾ ಅಂದ್ಲು
ಮೂರನೇ ಮದುವೆ ಸಿಂಪಲ್ಲಾಗೇ ಇರಬೇಕು ಅಂದೆ
ಯಾವ ದೇವರು ಇಷ್ಟ ಅಂದ್ಲು
ರವಿಚಂದ್ರನ್‍ರ ಮನೆ ದೇವ್ರು ಅಂದೆ
ನಿಮ್ಮ ಫ್ಯಾನ್ಸ್ ಬಗ್ಗೆ ಹೇಳಿ ಅಂದ್ಲು
ಮೂರು ಉಷಾ, ಎರಡು ಖೇತಾನ್ ಅಂದೆ
ಕಾಫಿ-ಟೀ ಕುಡೀತೀರಾ ಅಂದ್ಲು
ತಿನ್ನೋಕೆ ಅದು ಬಿಸ್ಕೆಟ್ ಅಲ್ಲಾ ಅಂದೆ
ಹಬ್ಬಗಳಿಗೆ ಬಟ್ಟೆ ಹಾಕ್ತೀರಾ ಅಂದ್ಲು
ಬಟ್ಟೆ ಹಾಕದೆ ಹಬ್ಬ ಮಾಡೋ ಸಂಪ್ರದಾಯ ನಮ್ಮಲ್ಲಿಲ್ಲ ಅಂದೆ
ಪಾನ್ ಕಾರ್ಡ್ ಗೊತ್ತಾ ಅಂದ್ಲು
ಪಾನ್ ಹಾಕ್ಕೊಂಡ್ ಉಗಿಯೋದು ಗೊತ್ತು ಅಂದೆ
ಆಧಾರ್ ಇದೆಯೇ ಅಂದ್ಲು
ನಮ್ಮನೆಗೆ ನಾನೇ ಆಧಾರ ಅಂದೆ
ಗೂಗಲ್ ಕೂಡಾ ಗೊತ್ತಿಲ್ವಾ ಅಂದ್ಲು
ಈ ಪಾಗಲ್‍ಗೆ ಏನೂ ಗೊತ್ತಿಲ್ಲ ಅಂದೆ
ನೆಟ್ ಬಗ್ಗೆ ಒಂಚೂರು ಗೊತ್ತಿಲ್ವಾ ಅಂದ್ಲು
ನೆಟ್ಟಗಿದ್ರೆ ತಾನೇ ಗೊತ್ತಾಗೋದು ಅಂದೆ
ಸ್ಮಾರ್ಟ್ ಫೋನ್ ಗೊತ್ತಾ ಅಂದ್ಲು
ನಾನೇ ಸ್ಮಾರ್ಟ್ ಅಂತ ಗೊತ್ತು ಅಂದೆ
ಎಣ್ಣೆ ಹೊಡೀತೀರಾ ಅಂದ್ಲು
ಎಣ್ಣೆ ಹೊಡೀತೀನಿ, ಬಾಟ್ಲು ಒಡೆಯಲ್ಲ ಅಂದೆ
ಟ್ರಂಪ್ ಯಾರು ಅಂತಾ ಗೊತ್ತಾ ಅಂದ್ಲು
ಅಜ್ಜಿ ಟ್ರಂಕ್ ಮಾತ್ರ ಗೊತ್ತು ಅಂದೆ
ರಾಮಾಯಣ ಗೊತ್ತಾ ಅಂದ್ಲು
ನಮ್ಮನೇಲಿ ದಿನಾ ನಡೆಯುತ್ತೆ ಅಂದೆ
ಸಚಿನ್ ಗೊತ್ತಾ ಅಂದ್ಲು
ನನಗೆ ಅವರು ಗೊತ್ತು, ಅವರಿಗೆ ನಾನು ಗೊತ್ತಿಲ್ಲ ಅಂದೆ
ನಿಮಗೆ ಯಾವ ಪಕ್ಷ ಇಷ್ಟಾ ಅಂದ್ಲು
ನನಗೆ ಪಿತೃಪಕ್ಷ ಇಷ್ಟ ಅಂದೆ
ರಾತ್ರಿ ಕನಸು ಬೀಳುತ್ತಾ ಅಂದ್ಲು
ಎಷ್ಟೋ ಸಾರಿ ಮಂಚದಿಂದ ನಾನೇ ಬಿದ್ದಿದೀನಿ ಅಂದೆ
ನಿಮಗೆ ಸಿಟ್ಟು ಬರುತ್ತಾ ಅಂದ್ಲು
ಸಿಟ್ಟು ಬಂದ್ರೆ ನನ್ ತಂಟೆಗೆ ನಾನೇ ಹೋಗಲ್ಲ ಅಂದೆ
ನಾನ್‍ವೆಜ್ ತಿಂತೀರಾ ಅಂದ್ಲು
ಇನ್ನೊಬ್ಬರ ತಲೆ ತಿಂತೀನಿ ಅಂದೆ
ಸಿಗರೇಟ್ ಸೇದ್ತೀರಾ ಅಂದ್ಲು
ರೇಟ್ ಜಾಸ್ತಿ ಅಂದೆ
ಏನ್ ಓದಿದೀರಾ ಅಂದ್ಲು
ಕನ್ನಡಪ್ರಭ, ಪ್ರಜಾವಾಣಿ, ವಿಜಯ ಕರ್ನಾಟಕ ಅಂದೆ
ಕಟ್ಟಪ್ಪ ಬಾಹುಬಲೀನಾ ಯಾಕೆ ಕೊಂದ ಗೊತ್ತಾ ? ಅಂದ್ಲು
2000 ನೋಟಿಗೆ ಚಿಲ್ರೆ ತರಕ್ಕಾಗಲಿಲ್ಲಾ ಅದಕ್ಕೆ ಅಂದೆ
ನಾಯಿ ಕಂಡ್ರೆ ನಿಮಗೆ ಭಯಾನಾ ಅಂದ್ಲು
ಅಷ್ಟೊತ್ತಿಂದ ಧೈರ್ಯವಾಗಿ ಮಾತಾಡ್ತಿಲ್ವಾ ಅಂದೆ
ನಿಮ್ಮತ್ರ ಮಾತಾಡೋದೇ ವೇಸ್ಟು ಅಂದ್ಲು
ನಿಮ್ಮತ್ರ ಮಾತಾಡೋದೇ ಟೇಸ್ಟು ಅಂದೆ
ಬ್ಯಾಟರಿ ಲೋ ಅಂದೆ
ಹೋಗಲೋ ಅಂದ್ಲು
ಅಂತೂ ಫೋನ್ ಕಟ್ಟಾಯಿತು
-ಎಲ್.ವಿ. ಕುಮಾರಸ್ವಾಮಿ

Leave a Comment