ಪುಣೆ ಪೋಸ್ಟ್ ಮಾರ್ಟಂ

ಐದು ದಿನಗಳ ಟೆಸ್ಟ್ ಪಂದ್ಯವನ್ನು ಕೇವಲ ಎರಡೂವರೆ ದಿನಗಳಲ್ಲೇ ಮುಗಿಸಬಹುದೆಂದು ಜಗತ್ತಿಗೆ ತೋರಿಸಿಕೊಟ್ಟಿದೆ ಟೀಂ ಇಂಡಿಯಾ. ಮೊದಲನೇ ಟೆಸ್ಟ್ ನಲ್ಲಿ ಆಸ್ಟ್ರೀಲಿಯಾದ ಸ್ಟೀಫನ್ ಒ ಕೀಫೆಯ ಸ್ಪಿನ್ ಬಲೆಗೆ ಟೀಂ ಇಂಡಿಯಾ ತನು-ಮನ-ಧನ ಅರ್ಪಿಸಿ ಶರಣಾಗಿದ್ದಾರೆ. ಒಟ್ಟಿನಲ್ಲಿ ಸತತ ಗೆಲುವನ್ನು ಟೀಂ ಇಂಡಿಯಾ ತ್ಯಾಗ ಮಾಡಿದ್ದು ಕಡಿಮೆ ಸಾಧನೆಯೇನಲ್ಲ. ಟೆಸ್ಟ್ ನಲ್ಲಿ ಈ ರೀತಿ ಅಮೋಘ ಆಟವಾಡಿ ಪ್ರೇಕ್ಷಕರ ತಾಳ್ಮೆ ಟೆಸ್ಟ್ ಮಾಡಿದ್ದಾರೆ.  ಇದ್ದ ಅಷ್ಟೂ ಜನ ಆಟಗಾರರು ಸೇರಿ, ಒಗ್ಗಟ್ಟಿನಿಂದ ಹೋರಾಡಿ, ಎಲ್ಲರಿಗೂ ಬ್ಯಾಟಿಂಗ್ ಮಾಡುವಂತಹ ವಾತಾವರಣ ಸೃಷ್ಟಿಸಿಕೊಂಡು ಮೊದಲ ಇನ್ನಿಂಗ್ಸ್ ನಲ್ಲಿ 105, ಎರಡನೇ ಇನ್ನಿಂಗ್ಸ್  ನಲ್ಲಿ 107 ರನ್ ಪೇರಿಸಿದ್ದು ಟೀಮ್ ಇಂಡಿಯಾ ಒಗ್ಗಟ್ಟಿನಲ್ಲಿ ಬಲವಿದೆ ಎಂದು ಸಾಬೀತು ಮಾಡಿದೆ. ವಿಶ್ವದ ನಂಬರ್ 1 ಟೀಮ್‍ನ ಈ ಪರಿ ಆಟ ಅಭಿಮಾನಿಗಳಿಗೆ ಕುಳಿತಲ್ಲೇ ನಂ. 1 ಮಾಡಿಕೊಳ್ಳುವಂತೆ ಮಾಡಿದ್ದು ಸುಳ್ಳಲ್ಲ.  ಇದೇ ರೀತಿ ಎಲ್ಲ ಮಹಾನುಭಾವರುಗಳೂ ಸೇರಿ 105, 107 ಬಾರಿಸುತ್ತಾ ಹೋದರೆ ಎಲ್ಲರನ್ನೂ 108 ರಲ್ಲಿ ಸಾಗಿಸಿ ಚಿಕಿತ್ಸೆ ಕೊಡಿಸಬೇಕಾಗುತ್ತದೇನೋ ?   11 ಜನ ಆಟಗಾರರು ಒಗ್ಗಟ್ಟಾಗಿ ಎರಡು ಇನ್ನಿಂಗ್ಸ್ ಗಳಿಂದ ದ್ವಿಶತಕ ಬಾರಿಸಿ ಅಭಿಮಾನಿಗಳನ್ನು ತಣಿಸಿದ್ದಾರೆ. ಮುಂದೆ ಇದೇ ರೀತಿ ಬಾರಿಸಿದರೆ ಅಭಿಮಾನಿಗಳೇ ಆಟಗಾರರನ್ನು ಬಾರಿಸುವುದರಲ್ಲಿ ಅನುಮಾನವಿಲ್ಲ.   ತಂಡದ ಕೋಚ್, ಫಿಸಿಯೋ ಇತರೆ ಎಲ್ಲಾ ಸಿಬ್ಬಂದಿಗಳಿಗೂ ಬ್ಯಾಟ್ ಮಾಡುವ ಅವಕಾಶ ಕೊಟ್ಟಿದ್ದರೂ ಕೂಡ ಈ ಬಾರಿ ಆಸಿಸ್ ಮೊತ್ತ ಮುಟ್ಟಲಾಗುತ್ತಿರಲಿಲ್ಲ ಬಿಡಿ. ಇನ್ನು ಪ್ರಥಮ ಇನ್ನಿಂಗ್ಸ್ ನಲ್ಲಿ ಮುರಳಿವಿಜಯ್ 10, ದ್ವಿತೀಯ ಇನ್ನಿಂಗ್ಸ್ ನಲ್ಲಿ 02 ರನ್ ಗಳಿಸಿ ಜಲಬಾಧೆಯಾದವರಂತೆ ಅತಿ ತುರ್ತಾಗಿ ಪೆವಿಲಿಯನ್‍ಗೆ ಮರಳಿದ್ದನ್ನು ನೋಡಿದರೆ ಇನ್ನು ಮುಂದೆ ಇವರು ತಮ್ಮ ಹೆಸರನ್ನು `ಮರಳಿ’ ವಿಜಯ್ ಎಂದು ಬದಲಾಯಿಸಿಕೊಳ್ಳುವುದು ಒಳ್ಳೆಯದು.  ಕೆ.ಎಲ್. ರಾಹುಲ್ ಫಸ್ಟ್ ಇನ್ನಿಂಗ್ಸ್ ನಲ್ಲಿ ಜಾಸ್ತಿ ರನ್ ಹೊಡೆದು ಮಾಡಿದ ತಪ್ಪನ್ನು ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಮಾಡದೇ 10 ರನ್ ಮಾತ್ರ ಗಳಿಸಿ ಎಲ್ಲಾ ಆಟಗಾರರನ್ನೂ ಸಂಭ್ರಮದಲ್ಲಿ ತೇಲಿಸಿದರು.  ಚೇತೇಶ್ವರ ಎರಡೂ ಇನ್ನಿಂಗ್ಸ್ ಗಳಲ್ಲಿ ಸುಮಾರಾಗಿ ಆಡಿದರೆ ಇನ್ನು ಇಂಡಿಯಾ ಚೇತರಿಸಿಕೊಳ್ಳುವುದೆಲ್ಲಿ ಬಂತು ? ತಂಡದ ನಾಯಕ ವಿರಾಟ್‍ಕೊಹ್ಲಿಯನ್ನಂತೂ ಹೊಗಳಿ ಹೊಗಳಿ ಎಲ್ಲರ ಮನೆಯ ಅಟ್ಟಕ್ಕೇರಿಸಲಾಗಿತ್ತು.  ಇದರಿಂದ ವಿರಾಟ್‍ಗೆ ಕೂಡ ತುಂಬಾನೇ ಸಿಟ್ಟಿತ್ತು ಅನ್ಸುತ್ತೆ.  ಬರೀ ಸಂಪಾದನೆಯೊಂದೇ ಜೀವನವಲ್ಲ, ಜೀವನದಲ್ಲಿ ಶೂನ್ಯ ಸಂಪಾದನೆಯೂ ಇರಬೇಕೆಂದು ಮನಗಂಡು ಫಸ್ಟ್ ಇನ್ನಿಂಗ್ಸ್ ನಲ್ಲಿ ಶೂನ್ಯ ಸಂಪಾದನೆಗೈದರೆ, ಎರಡನೇ ಇನ್ನಿಂಗ್ಸ್ ನಲ್ಲಿ 13 ರನ್ ಬಾರಿಸಿ ಮೊದಲನೇ ಇನ್ನಿಂಗ್ಸ್ ನ ತಮ್ಮ ರೆಕಾರ್ಡ್‍ನ್ನು ತಾವೇ ಬ್ರೇಕ್ ಮಾಡಿ ಖುಷಿಪಟ್ಟರು.  ತಮಗೆ ವಯಸ್ಸು ದಾಟಿದ್ದರೂ ಎರಡೂ ಇನ್ನಿಂಗ್ಸ್‍ಗಳಲ್ಲಿ  ಅಜಿಂಕ್ಯ ರೆಹಾನೆ 20 ರನ್ ದಾಟಲಿಲ್ಲ.  ಕೀಪರ್ ವೃದ್ದಿಮಾನ್ ಸಾಹ ಸಹ ಎರಡೂ ಇನ್ನಿಂಗ್ಸ್ ಗಳಲ್ಲಿ ಏನೂ ಕಿಸಿಯಲಿಲ್ಲ.  ಆಲ್‍ರಂಡರ್ ಜಡೇಜಾ ಪ್ರಥಮ ಇನ್ನಿಂಗ್ಸ್ ನಲ್ಲಿ 2 ರನ್ ಗಳಿಸಿ ನಿರಾಶರಾಗಿದ್ದು, ದ್ವಿತೀಯ ಇನ್ನಿಂಗ್ಸ್ ನಲ್ಲಿ 3 ರನ್ ಗಳಿಸಿ ತಮ್ಮ ರೆಕಾರ್ಡ್ ಬ್ರೇಕ್ ಮಾಡಿ ಕುಣಿದು ಕುಪ್ಪಳಿಸಿದರು.  ಕೆಲವೇ ನಿಮಿಷಗಳಲ್ಲಿ ಕಾಂಗರೂಗಳು ಜಡೇ `ಜಾ’ ಎಂದು ಪೆವಿಲಿಯನ್‍ಗೆ ದಬ್ಬಿದರು.  ಜಯಂತ್ ಯಾದವ್ ಕೂಡ ಎರಡೂ ಇನ್ನಿಂಗ್ಸ್ ಗಳಿಂದ 2 ಮತ್ತು 5 ರನ್‍ ಗಳಿಸಿ ಸಿಂಗಲ್‍ ನಂಬರ್ ಲಾಟರಿ ನೆನಪಿಸಿದರು.  ಬ್ಯಾಟಿಂಗ್‍ನಿಂದ ಕೂಡ ಸದ್ದು ಮಾಡುತ್ತಿದ್ದ ಅಶ್ವಿನ್ ಈ ಬಾರಿ ಮಾತ್ರ ಅಬ್ಬರಿಸದೆ ನಮ್ಮ ಮಾಜಿ ಪ್ರಧಾನಿಯಂತೆ ಮೌನವಾಗಿದ್ದರು.  ಲಾಸ್ಟ್ ಪಂಚ್ ಉಮೇಶ್ ಯಾದವ್ ಮತ್ತು ಇಶಾಂತ್ ಶರ್ಮರಿಗಂತೂ ಪೆವಿಲಿಯನ್‍ಗೆ ಮರಳಲು ಸೂಪರ್‍ಮಿನಿಟ್‍ನಂತೆ ಟೈಮ್ ನೀಡಲಾಗಿತ್ತು.  ಅದನ್ನು ಅವರಿಬ್ಬರೂ ಅಷ್ಟೇ ಶಿಸ್ತುಬದ್ಧವಾಗಿ ಪಾಲಿಸಿದರೂ ಕೂಡ.  ಟೀಮ್ ಇಂಡಿಯಾ ಆಸ್ಟ್ರೇಲಿಯಾ ನಾಯಕ ಸ್ಮಿತ್‍ಗೆ ಐದು ಬಾರಿ ಜೀವದಾನ ನೀಡಿ ದಾನಗಳಲ್ಲೇ ದೊಡ್ಡ ದಾನ ಜೀವದಾನವೆಂದು ಮನದಟ್ಟು ಮಾಡಿಕೊಟ್ಟಿತು.  ಆತ ಔಟಾಗಲೇ ಬೇಕೆಂದು ಎಷ್ಟು ಪ್ರಾಮಾಣಿಕ ಪ್ರಯತ್ನ ಪಟ್ಟರೂ ನಮ್ಮವರು ಆತನ ಆಸೆಗೆ ತಣ್ಣೀರೆರಚಿದರು.  ಬಹಳ ನೊಂದುಕೊಂಡು, ಬಹಳ ನೋವಿನಿಂದ ಆತ ಸೆಂಚುರಿ ಮುಗಿಸಿದ.  ಆತ ಗಳಿಸಿದ 109 ರನ್ ದಾಖಲೆಯನ್ನು ನಮ್ಮ ಹನ್ನೊಂದೂ ಜನ ಆಟಗಾರರು ಬ್ಯಾಟ್ ಬೀಸಿದರೂ ಆತನ ಹತ್ತಿರ ಬರಲಾಗಲಿಲ್ಲ. ಅಂತೂ ಬೆಂಗಳೂರಿನಲ್ಲಿ ನಡೆಯುವ 2ನೇ ಟೆಸ್ಟ್‍ಗೆ ಕೇವಲ ಮೂರೇ ದಿನಕ್ಕೆ ಟಿಕೆಟ್ ವಿತರಿಸಲಾಗಿದೆಯಂತೆ !
–    ಎಲ್.ವಿ. ಕುಮಾರಸ್ವಾಮಿ

Leave a Comment