ಪಟೇಲ್ ನಿಧನಕ್ಕೆ ಡಾ. ಶಿವಮೂರ್ತಿ ಮುರುಘಾ ಶರಣರು ತೀವ್ರ ಸಂತಾಪ

ನಾಡಿನ ಕಾನೂನು ತಜ್ಞ, ಶಿಕ್ಷಣವೇತ್ತ ಪ್ರಗತಿಪರ ಚಿಂತಕ, ಮಾನವ ಹಕ್ಕುಗಳ ಪ್ರತಿಪಾದಕ, ಸಂಘಟನೆ ಮತ್ತು ಹೋರಾಟಗಳ ನಿರ್ಮಾತೃ ಹಲವು ಶಿಕ್ಷಣ ಸಂಸ್ಥೆಗಳ ಪದಾಧಿಕಾರಿ, ವಿದ್ಯಾರ್ಥಿಸ್ನೇಹಿ ಶಿಕ್ಷಕ  ಎಸ್.ಹೆಚ್. ಪಟೇಲ್ ಅವರ ನಿಧನಕ್ಕೆ ಡಾ. ಶಿವಮೂರ್ತಿ ಮುರುಘಾ ಶರಣರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶ್ರೀಮಠದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರೊಬ್ಬ ಪ್ರಗತಿಪರ ಚಿಂತಕರು. ಬುದ್ಧ ಬಸವಣ್ಣ ಲೋಹಿಯಾ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅನುಸರಿಸಿದವರು. ಮಾನವ ಹಕ್ಕುಗಳಿಗಾಗಿ ನಡೆದ ಹೋರಾಟಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಜೆ.ಹೆಚ್. ಪಟೇಲ್‍ರಿಗಿಂತ ಹೆಚ್ಚು ಅಧ್ಯಯನದಲ್ಲಿ ತೊಡಗಿದ್ದರು. 2007ರಲ್ಲಿ ನಮ್ಮ ಎಸ್‍ಜೆಎಂ ವಿದ್ಯಾಪೀಠದ ಕಾರ್ಯದರ್ಶಿಯಾಗಿ ನೇಮಕಗೊಂಡು ಹಲವಾರು ಬದಲಾವಣೆಗಳನ್ನು ತಂದರು. ಅವರದು ಸ್ವಾಮಿನಿಷ್ಠೆ. ಇವರ ನಿಷ್ಠೆಯನ್ನು ನೋಡಿ 2013ರಲ್ಲಿ ವಿದ್ಯಾಪೀಠದ ಉಪಾಧ್ಯಕ್ಷರನ್ನಾಗಿ ಮಾಡಲಾಯಿತು. ಅವರ ಸೇವೆ ಅಪ್ರತಿಮ. ಇತ್ತೀಚೆಗೆ ಅವರು ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಲಾಯಿತು. ಇತ್ತೀಚೆಗೆ ಅವರ ಮನೆಗೆ ತೆರಳಿ ಅವರ ಆರೋಗ್ಯವನ್ನು ವಿಚಾರಿಸಿಕೊಂಡು ಬಂದಿದ್ದೆವು. ಅವರ ನಿಧನ ಶ್ರೀಮಠಕ್ಕೆ ಮತ್ತು ಸಮಾಜಕ್ಕೆ ಹೆಚ್ಚಿನ ನಷ್ಠವನ್ನುಂಟು ಮಾಡಿದೆ. ಅವರ ಕುಟುಂಬವರ್ಗದವರಿಗೆ, ಹಿತೈಷಿಗಳಿಗೆ, ವಿದ್ಯಾರ್ಥಿಶಿಷ್ಯ ಬಳಗಕ್ಕೆ ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಚೈತನ್ಯವನ್ನು ಬಸವಾದಿ ಶರಣರು ನೀಡಲಿ ಎಂದು ಸಂತಾಪ ವ್ಯಕ್ತಪಡಿಸಿದರು.
ಎಸ್‍ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಕೆ.ವಿ.ಪ್ರಭಾಕರ್, ಆಡಳಿತಾಧಿಕಾರಿಗಳಾದ ಡಾ. ಈ. ಚಿತ್ರಶೇಖರ್, ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ, ಎಂ.ರೇವಣ್ಣ, ಸಂಸ್ಥೆಯ ಶಾಲಾಕಾಲೇಜುಗಳ ಮುಖ್ಯಸ್ಥರು ಮತ್ತು ಬೋಧಕ ಹಾಗು ಬೋಧಕೇತರ ವರ್ಗದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇವರ ನಿಧನದಿಂದಾಗಿ ಎಸ್‍ಜೆಎಂ ವಿದ್ಯಾಪೀಠದ ಎಲ್ಲ ಶಾಲಾಕಾಲೇಜುಗಳಿಗೆ 29ರಂದು ಗುರುವಾರ ರಜೆಯನ್ನು ಘೋಷಿಸಲಾಗಿದೆ.

Leave a Comment