ನೀವು ಅಂದುಕೊಂಡಿದ್ದಕ್ಕಿಂತಲೂ ನಿಮ್ಮ ಮೆದುಳಿನ ಲೆಕ್ಕಾಚಾರ ಉತ್ತಮ!

ಒಂದು ದೃಶ್ಯ ಸಂಬಂಧ ಏಕಕಾಲದಲ್ಲಿ ವಿವಿಧ ದೃಷ್ಟಿಕೋನಗಳಲ್ಲಿ ಮೆದುಳಿನ ಚಿಂತನೆ

ಬಹುಶಃ ನಮ್ಮ ಮೆದುಳಿನ ಲೆಕ್ಕಾಚಾರದ ಶಕ್ತಿ ಏನು ಎಂಬುದು ನಮಗೆ ತಿಳಿದಿಲ್ಲ. ನಾವು ಅಂದುಕೊಂಡಿದ್ದಕ್ಕಿಂತಲೂ ನಮ್ಮ ಮೆದುಳು ಲೆಕ್ಕಾಚಾರದಲ್ಲಿ ಉತ್ತಮವಾಗಿದೆ ಎಂದು ಸಂಶೋಧನೆಯೊಂದು ಹೇಳಿದೆ. ನಮ್ಮ ಮೆದುಳು ನಮ್ಮ ಕಣ್ಣುಗಳ ಸಹಾಯದಿಂದ ನಮ್ಮ ಸುತ್ತಮುತ್ತಲಿನ ಜಟಿಲ ಗ್ರಹಿಕೆಗಳನ್ನು ಒಟ್ಟುಗೂಡಿಸಿ, ಒಂದು ಸರಳ ಅವಲೋಕನವನ್ನಾಗಿ ಮಾಡುತ್ತದೆ ಮತ್ತು ಇದು ನಮ್ಮ ನಡವಳಿಕೆಗಳು ಮತ್ತು ತೀರ್ಮಾನಗಳನ್ನು ನಿರ್ಧರಿಸುತ್ತದೆ ಎಂಬ ಅಚ್ಚರಿಯ ಮಾಹಿತಿಯನ್ನು ಸಂಶೋಧಕರು ಹೊರಹಾಕಿದ್ದಾರೆ. ನಮ್ಮ ನಡವಳಿಕೆಯ ಆಧಾರದ ಮೇಲೆ ನಾವು ಆ ನಿರ್ಧಿಷ್ಟ ಘಟನೆ ಕುರಿತಂತೆ ನಿರ್ಧಾರ ತಳೆಯುತ್ತೇವೆ. ಆದರೆ ನಮ್ಮ ಮೆದುಳು ಮಾತ್ರ ಘಟನೆ ಕುರಿತಂತೆ ನಿಖರವಾಗಿ ಅವಲೋಕನ ಮಾಡುತ್ತದೆ ಎಂದು ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಪ್ರಿನ್ಸ್ ಟನ್ ವಿಶ್ವ ವಿದ್ಯಾಲಯದ ಮನಃಶಾಸ್ತ್ರಜ್ಞ ಪ್ರೊ.ಕೆನ್ನೆಥ್ ನಾರ್ಮನ್ ಅವರು, ನಮ್ಮ ಬಾಹ್ಯ ಗ್ರಾಹ್ಯ ಶಕ್ತಿಗಿಂತಲೂ ನಮ್ಮ ಆಂತರಿಕ ಗ್ರಾಹ್ಯ ಶಕ್ತಿ  ಅತ್ತ್ಯುತ್ತಮವಾಗಿದೆ. ನಮ್ಮ ಮೆದುಳು ನಮ್ಮ ಸುತ್ತಮುತ್ತ ನಡೆಯುತ್ತಿರುವ ಪ್ರತಿಯೊಂದು ಘಟನೆಯನ್ನೂ ಗಂಭೀರವಾಗಿ ಅವಲೋಕಿಸುತ್ತದೆ. ನಾವು ನೋಡುವ ಒಂದು ದೃಶ್ಯವನ್ನು ಏಕಕಾಲದಲ್ಲಿ ಅದು ನಾನಾ ವಿಧಗಳಲ್ಲಿ ಅವಲೋಕನ ಮಾಡುತ್ತದೆ ಎಂದು ಹೇಳಿದ್ದಾರೆ.ಹೀಗೆ ಮೆದುಳಿನ ದೃಶ್ಯಾಧಾರಿತ ಅವಲೋಕನ ಶಕ್ತಿ ನಮ್ಮ ಕಣ್ಣಿನ ಹಿಂದೆ ಶೇಖರವಾಗಿರುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಈ ಭಾಗವನ್ನು ವೈದ್ಯಕೀಯಶಾಸ್ತ್ರದಲ್ಲಿ ಆರ್ಬಿಟೋ ಫ್ರಂಟಲ್  ಕೋರ್ಟೆಕ್ಸ್ ಎಂದು ಕರೆಯುತ್ತಾರಂತೆ. ತಜ್ಞರು ಮೆದುಳಿನ ಈ ಕ್ರಿಯೆಯನ್ನು ಒಂದು ಸಫಾರಿ ಪಾರ್ಕ್ ಅನ್ನು ವೀಕ್ಷಿಸುವ ಪ್ರಕ್ರಿಯೆಗೆ ಹೋಲಿಸಬಹುದಾಗಿದ್ದು, ಸಫಾರಿ ಪಾರ್ಕ್ ಒಂದು ದೃಶ್ಯ  ಎಂದಿಟ್ಟುಕೊಂಡರೆ ದೃಶ್ಯದ ಹಿಂದಿನ ಕಾರಣಗಳನ್ನು ಸಫಾರಿ ಪಾರ್ಕ್ ನ ವಿವಿಧ ಭಾಗಗಳೆಂದು ಕರೆಯಬಹುದಾಗಿದೆ.ಹೇಗೆ ಸಫಾರಿ ಪಾರ್ಕ್ ಅನ್ನು ವಿವಿಧ ವಿಭಾಗಗಳಾಗಿ ವಿಂಗಡಿಸಿ ಆನೆ, ಜಿರಾಫೆ, ಸಿಂಹ, ಹುಲಿ ಹೀಗೆ ವಿವಿಧ ಪ್ರಾಣಿಗಳನ್ನು ವಿಂಗಡಿಸಲಾಗಿದೆ ಎಂಬುದನ್ನು ನಾವು ಭಾವಿಸುತ್ತೇವೆಯೋ ಹಾಗೆಯೇ  ಮೆದುಳು ಕೂಡ ಒಂದು ಘಟನೆ ಕುರಿತಂತೆ ನಾನಾ ದೃಷ್ಟಿಕೋನದಲ್ಲಿ ಆಲೋಚಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ. ಅಂತೆಯೇ ಪ್ರತಿಯೊಂದು ಘಟನೆಗೂ ನಮ್ಮ ಮೆದುಳು ನಾಲ್ಕು ರೀತಿಯ  ಆಲೋಚನೆಗಳನ್ನು ಮಾಡಿ ಯಾವ ಆಲೋಚನೆ ಘಟನೆಗೆ ನಿಖರವಾಗಿರುತ್ತದೆಯೋ ಅದನ್ನೇ ಆರಿಸುತ್ತದೆಯಂತೆ. ಈ ಸಂಶೋಧನೆಯಿಂದ ತಿಳಿದು ಬಂದ ಒಂದು ಮಾಹಿತಿ ಅಂದರೆ, ನಿಗದಿತ ದೃಶ್ಯಕ್ಕೆ ಸಂಬಂಧಿಸಿದಂತೆ ನಮ್ಮ ಮೆದುಳ ಸಂಕೀರ್ಣ ಯೋಜನೆಗಳನ್ನು ಹಾಕಿಕೊಂಡು, ಪರಿಸ್ಥಿತಿಗಳು ಹೇಗೆ  ಮತ್ತು ಏಕೆ ಬದಲಾಗುತ್ತಿವೆ ಎಂಬಿತ್ಯಾದಿ ಅಂಶಗಳ ಕುರಿತು ಕ್ರಮಬದ್ಧ ಅವಲೋಕನ ಮಾಡುತ್ತದೆ ಎಂಬ ವಿಚಾರವನ್ನು ವಿಜ್ಞಾನಿಗಳ ಮನಗಂಡಿದ್ದಾರೆ.

Leave a Comment