‘ನೀರ್ ದೋಸೆ’ ಪ್ರದರ್ಶನಕ್ಕೆ ಮತ್ತಷ್ಟು ಮಲ್ಟಿಪ್ಲೆಕ್ಸ್ ಪರದೆಗಳು!

ಬೆಂಗಳೂರು: ಮಲ್ಟಿಪ್ಲೆಕ್ಸ್ ಗಳಿಂದ ಕನ್ನಡ ಚಿತ್ರಗಳನ್ನು ನಿರ್ದಾಕ್ಷಿಣ್ಯವಾಗಿ ಎತ್ತಂಗಡಿ ಮಾಡುತ್ತಾರೆ ಎಂಬುದು ಸರ್ವೇಸಾಮಾನ್ಯ ಆರೋಪ, ಆದರೆ ಇದಕ್ಕೆ ತದ್ವಿರುದ್ಧವಾದ ನಡೆಯಲ್ಲಿ ಕಳೆದ ವಾರ ಬಿಡುಗಡೆಯಾದ ‘ನೀರ್ ದೋಸೆ’ ಚಿತ್ರಕ್ಕೆ ಈ ಶುಕ್ರವಾರದಿಂದ ಹೆಚ್ಚಿನ ಮಲ್ಟಿಪ್ಲೆಕ್ಸ್ ಸ್ಕ್ರೀನ್ ಗಳು ಸಿಕ್ಕಿರುವುದು ವಿಶೇಷ.
ಜಗ್ಗೇಶ್, ಹರಿಪ್ರಿಯಾ, ದತ್ತಣ್ಣ ಮತ್ತು ಸುಮನ್ ರಂಗನಾಥನ್ ನಟಿಸಿರುವ ಈ ಸಿನೆಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದರು, ಭರದ ಪ್ರದರ್ಶನ ಕಾಣುತ್ತಿದೆ. ಇದೇ ವಿಜಯ್ ಪ್ರಸಾದ್ ನಿರ್ದೇಶನದ ಈ ಚಿತ್ರದ ಪ್ರದರ್ಶನಕ್ಕೆ ಹೆಚ್ಚಿನ ಪರದೆಗಳು ದೊರಕಿರುವುದಕ್ಕೆ ಕಾರಣ.
“ನಾವು 185 ಸ್ಕ್ರೀನ್ ಗಳಲ್ಲಿ ಪ್ರದರ್ಶನ ಪ್ರಾರಂಭಿಸಿದೆವು ಮತ್ತು ಇದು ವಾರಾಂತ್ಯದಲ್ಲಿ 200 ಕ್ಕೆ ಏರಿತು. ಮುಂದಿನ ವಾರ ಇನ್ನೂ ಹೆಚ್ಚುವರಿ 30 ಸ್ಕ್ರೀನ್ ಗಳಲ್ಲಿ ಚಿತ್ರ ಪ್ರದರ್ಶನ ಕಾಣಲಿದೆ” ಎಂದು ನಿರ್ಮಾಪಕ ಪ್ರಸನ್ನ ಹೇಳುತ್ತಾರೆ. “ನಮ್ಮ ಸಿನೆಮಾಗೆ ಸಿಕ್ಕ ಪ್ರತಿಕ್ರಿಯೆಗೆ ಸಂತಸಗೊಂಡು ಪಿವಿಆರ್ ನವರೇ 10 ಹೆಚ್ಚುವರಿ ಸ್ಕ್ರೀನ್ ಗಳನ್ನು ನೀಡಿದ್ದಾರೆ” ಎನ್ನುತ್ತಾರೆ.
ಗೌರಿ ಗಣೇಶ ಹಬ್ಬದ ಹಿಂದಿನ ದಿನ ಬಿಡುಗಡೆಯಾದ ‘ನೀರ್ ದೋಸೆ’ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಕಂಡಿದೆಯಂತೆ. “ಆಶ್ಚರ್ಯದ ಸಂಗತಿ ಎಂದರೆ ‘ನೀರ್ ದೋಸೆ’ಗೆ ಪ್ರೇಕ್ಷಕರು ಪುನಾರಾವರ್ತಿತವಾಗಿ ಆಗಮಿಸುತ್ತಿದ್ದಾರೆ ಮತ್ತು ಅದರಲ್ಲೂ ಮಲ್ಟಿಪ್ಲೆಕ್ಸ್ ಗಳಲ್ಲಿ ಹೆಚ್ಚಾಗಿ ಬರುತ್ತಿದ್ದಾರೆ” ಎನ್ನುತ್ತಾರೆ ಪ್ರಸನ್ನ. “ಜನಕ್ಕೆ ಒಮ್ಮೆ ನೋಡಿದ ಮೇಲೆ ತೃಪ್ತಿಯಾಗದೆ ಸಂಭಾಷಣೆ-ಡೈಲಾಗ್ ಕೇಳಲು ಮತ್ತೆ ಮತ್ತೆ ಹೋಗುತ್ತಿದ್ದಾರೆ” ಎನ್ನುತ್ತಾರೆ.

Leave a Comment