ನನಸಾದ ಮಳೆಯ ಕನಸು

ನಿರ್ಮಾಪಕ ಜಿ.ಗಂಗಾಧರ್‌ ಅವರು ‘ಮುಂಗಾರು ಮಳೆ-2’ ಸಿನಿಮಾದ ಶೀರ್ಷಿಕೆಯನ್ನು 2007ರಲ್ಲೇ ನೋಂದಾಯಿಸಿದ್ದರಂತೆ. ಒಂಬತ್ತು ವರ್ಷಗಳ ನಂತರ ಅವರು ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ.

ಶರಣು ಹುಲ್ಲೂರು

ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದೆ ‘ಮುಂಗಾರು ಮಳೆ-2’ ಚಿತ್ರ. ಈ ಕುರಿತು ನಿರ್ಮಾಪಕ ಜಿ.ಗಂಗಾಧರ್‌ ಮಾತಾಡಿದ್ದಾರೆ. ಯೋಗರಾಜ್‌ ಭಟ್‌ ನಿರ್ದೇಶನದ ‘ಮುಂಗಾರು ಮಳೆ’ ಚಿತ್ರ ರಿಲೀಸ್‌ ಆಗಿದ್ದು 2006ರಲ್ಲಿ. ಕನ್ನಡ ಚಿತ್ರರಂಗದ ಗತಿಯನ್ನೇ ಬದಲಿಸಿದ ಚಿತ್ರವದು. ದೇಶದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಅದು ತನ್ನ ಛಾಪು ಮೂಡಿಸಿತ್ತು. ಹತ್ತು ವರ್ಷಗಳ ನಂತರ ಮಳೆ ಮತ್ತೊಮ್ಮೆ ಮನರಂಜನೆಯ ತಂಪನ್ನೆರೆಯಲು ಬರುತ್ತಿದೆ. ಈ ಬಾರಿ ಅದು ಶಶಾಂಕ್‌ ನಿರ್ದೇಶನದಲ್ಲಿ ಸುರಿಯಲು ಸಜ್ಜಾಗಿದೆ.

ನಿರ್ಮಾಪಕರಿಗೆ ‘ಮುಂಗಾರು ಮಳೆ-2’ ಸಿನಿಮಾವನ್ನು ನಿರ್ಮಾಣ ಮಾಡಬೇಕು ಅನ್ನುವುದು ಇತ್ತೀಚಿನ ಕನಸಲ್ಲವಂತೆ. 2007ರಲ್ಲೇ ಈ ಶೀರ್ಷಿಕೆಯನ್ನು ನೋಂದಾಯಿಸಿದ್ದರಂತೆ. ‘ಒಂಬತ್ತು ವರ್ಷಗಳ ಹಿಂದೆ ಈ ಸಿನಿಮಾ ಮಾಡಬೇಕೆಂದು ತೀರ್ಮಾನ ಮಾಡಿದ್ದೆ. ಮೂರು ವರ್ಷಗಳ ಹಿಂದೆ ಗಣೇಶ್‌ ಅವರಲ್ಲೂ ಹೇಳಿದ್ದೆ. ಆದರೆ, ಮುಂಗಾರು ಮಳೆ ಸಿನಿಮಾ ಅಂತ ಹೇಳಿರಲಿಲ್ಲ. ಗಣೇಶ್‌ ಜತೆ ಮಾತಾಡಿ ಮನೆಗೆ ಹೋಗುವಾಗ ಅವರ ಪತ್ನಿ ಶಿಲ್ಪಾ ನನಗೆ ಕಾಲ್‌ ಮಾಡಿದರು. ಯಾಕೆ ಮುಂಗಾರು ಮಳೆ ಸೀಕ್ವೆಲ್‌ ಮಾಡಬಾರದು ಎಂದು ಕೇಳಿದರು. ನನ್ನ ಆಸೆಯೂ ಅದೇ ಆಗಿತ್ತು. ಅಲ್ಲಿಂದ ಸಿನಿಮಾ ಮಾಡುವ ಆಲೋಚನೆ ಗಟ್ಟಿಯಾಯಿತು’ ಅಂತಾರೆ ಗಂಗಾಧರ್‌.

ಅಂದುಕೊಂಡಂತೆ ಆಗಿದ್ದರೆ ಈ ಚಿತ್ರವನ್ನು ಯೋಗರಾಜ್‌ ಭಟ್‌ ನಿರ್ದೇಶನ ಮಾಡಬೇಕಿತ್ತು. ಆ ವೇಳೆಯಲ್ಲಿ ಅವರು ಬ್ಯುಸಿ ಇದ್ದ ಕಾರಣ ಮಾಡಲಾಗಿಲ್ಲ. ‘ಈಗ ಬ್ಯುಸಿ ಇದ್ದೇನೆ. ನೆಕ್ಸ್ಟ್‌ ಯಿಯರ್‌ ಚಿತ್ರ ಮಾಡೋಣ ಅಂದರು ಯೋಗರಾಜ್‌ ಭಟ್‌. ಅದೇ ವರ್ಷ ಸಿನಿಮಾ ಮಾಡಬೇಕು ಅಂತ ತೀರ್ಮಾನ ಮಾಡಿದ್ದರಿಂದ, ಶಶಾಂಕ್‌ ಅವರಿಗೆ ಸಿನಿಮಾ ಒಪ್ಪಿಸಿದೆವು. ಆಗಲೇ ನನ್ನೊಟ್ಟಿಗೆ ಶಶಾಂಕ್‌ ‘ಮೊಗ್ಗಿನ ಮನಸು’ ಸಿನಿಮಾ ಮಾಡಿದ್ದರು. ಅದು ಸೂಪರ್‌ ಹಿಟ್‌ ಆಗಿತ್ತು. ಹಾಗಾಗಿ ಮುಂಗಾರು ಮಳೆಯನ್ನು ಶಶಾಂಕ್‌ಗೆ ಒಪ್ಪಿಸಿದೆ. ಈ ಚಿತ್ರವನ್ನು ಅವರು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ’ ಅನ್ನುವುದು ನಿರ್ಮಾಪಕರ ಮಾತು.

ಇದೇ ಸೆ.9ರಂದು ಸಿನಿಮಾ ರಿಲೀಸ್‌ ಆಗುತ್ತಿದೆ. ಅದೇ ದಿನಾಂಕವನ್ನು ಫಿಕ್ಸ್‌ ಮಾಡಲು ಕಾರಣವಿದೆಯಂತೆ. ಮುಂಗಾರು ಮಳೆ ಗಣೇಶ್‌ ಅವರಿಗೆ 27ನೇ ಚಿತ್ರ. 2 ಮತ್ತು 7 ಸೇರಿದರೆ ಒಂಬತ್ತಾಗುತ್ತದೆ. ರವಿಚಂದ್ರನ್‌ಗೆ 90ನೇ ಸಿನಿಮಾ. ಇಲ್ಲಿಯೂ ಒಂಬತ್ತಿದೆ. ದಿನಾಂಕ ಮತ್ತು ತಿಂಗಳು ಕೂಡ 9. ಹೀಗಾಗಿ ಇದೇ ದಿನಾಂಕವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಆಗಲೇ ದಾಖಲೆ ಬರೆದಿದೆ

ಈ ಚಿತ್ರವನ್ನು ನಿರ್ಮಾಪಕರೇ ವಿತರಣೆ ಮಾಡಬೇಕಿತ್ತಂತೆ. ಅದಕ್ಕಾಗಿ ಸಿದ್ಧತೆಯನ್ನೂ ಮಾಡಿಕೊಂಡಿದ್ದರಂತೆ. ಗೋಕುಲ ಫಿಲ್ಮ್ಸ್ನವರು ಒತ್ತಾಯ ಮಾಡಿದ್ದರಿಂದ ಅವರಿಗೆ ವಿತರಣೆ ಹಕ್ಕನ್ನು ಬಿಟ್ಟುಕೊಟ್ಟಿದ್ದಾರೆ. ವಿದೇಶದಲ್ಲಿ 7 ಹಿಲ್ಸ್‌ ಎಂಟರ್‌ಟೇನ್‌ಮೆಂಟ್‌ನವರ ರಿಲೀಸ್‌ ಮಾಡುತ್ತಿದ್ದರೆ, ವಿದೇಶಗಳ ನೂರಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಈ ಸಿನಿಮಾ ರಿಲೀಸ್‌ ಆಗುತ್ತಿದೆ. ಆಸ್ಪ್ರೇಲಿಯಾ, ಚೈನಾ, ಜಪಾನ್‌, ಸೌತ್‌ ಆಫ್ರಿಕಾ, ಅಮೆರಿಕಾ ಸೇರಿದಂತೆ ಹಲವು ಕಡೆ ಈಗಾಗಲೇ ಬುಕ್ಕಿಂಗ್‌ ಶುರುವಾಗಿದೆ. ಮೇಕಪ್‌ ಕಲಾವಿದರಾದ ಬಸವರಾಜ್‌ ಮತ್ತು ಗೆಳೆಯರು ಬಾಂಬೆ ಕರ್ನಾಟಕಕ್ಕೆ ಭಾರೀ ಮೊತ್ತ ಕೊಟ್ಟು ಖರೀದಿಸಿರುವುದು ಮತ್ತೊಂದು ವಿಶೇಷ.

ರವಿಚಂದ್ರನ್‌, ಗಣೇಶ್‌ ಮತ್ತು ಶಶಾಂಕ್‌ ಅವರ ಸಹಕಾರ ದೊಡ್ದದು. ಇವರೆಲ್ಲ ನೆರವಿನಿಂದಾಗಿ ಚಿತ್ರವು ಸೊಗಸಾಗಿ ಮೂಡಿಬಂದಿದೆ. ಈ ಮೂಲಕ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ’

-ಜಿ.ಗಂಗಾಧರ್‌, ನಿರ್ಮಾಪಕ

Leave a Comment