ಜಾಹೀರಾ`ಥೂ’

ಇದು ಕಲಿಯುಗಕ್ಕಿಂತ ಹೆಚ್ಚಾಗಿ ಜಾಹೀರಾತು ಯುಗ.  ಜಾಹೀರಾತು ಇಲ್ಲದೆ ಪ್ರಪಂಚವೇ ಇಲ್ಲವೆಂಬಂತಾಗಿಬಿಟ್ಟಿದೆ.  ಇನ್ನು ಟಿ.ವಿ.ಗಳು ಮನೆಯಲಂಕರಿಸಿದ ಮೇಲಂತೂ ಜಾಹೀರಾತುಗಳದ್ದು ರುದ್ರನರ್ತನ.  ಟಿ.ವಿ. ವೀಕ್ಷಕರಿಗೆ ಈ ಜಾಹೀರಾತುಗಳು ದೊಡ್ಡ ಕಿರಿಕಿರಿ. ಜಾಹೀರಾ‘ಥೂ’ಗಳ ಕೃಪಾಕಟಾಕ್ಷದಿಂದ ಒಂದೂವರೆ ಗಂಟೆ ಸಿನಿಮಾಗಳು ಅರ್ಧದಿನಕ್ಕೆ ಮೋಕ್ಷ ಕಾಣುತ್ತಿವೆ. ಬೆಳಿಗ್ಗೆ ತಿಂಡಿ ಮುಗಿಸಿ ಯಾವುದಾದರೊಂದು ವಾಹಿನಿಯಲ್ಲಿ ಒಂದು ಚಲನಚಿತ್ರ ನೋಡಲು ಕುಳಿತರೆ ಜಾಹೀರಾತು ಹಾವಳಿಯಿಂದ ಅದು ಮುಗಿಯುವಷ್ಟರಲ್ಲಿ ಊಟದ ಸಮಯವಾಗಿಬಿಟ್ಟಿರುತ್ತದೆ.   ಇಲ್ಲಿಯವರೆಗೂ ಚಲನಚಿತ್ರಗಳ ಮಧ್ಯೆ ಜಾಹೀರಾತುಗಳೋ ? ಜಾಹೀರಾತುಗಳ ಮಧ್ಯೆ ಚಲನಚಿತ್ರಗಳೋ ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.  ಧಾರಾವಾಹಿಗಳ ವಿಚಾರಕ್ಕೆ ಬಂದರೆ ಮೊದಲೇ ಚಿರಂಜೀವಿಗಳೆಂಬ ಬಿರುದಾಂಕಿತ ಧಾರಾವಾಹಿಗಳು ಜಾಹೀರಾತುಗಳ ಪ್ರಭಾವದಿಂದ ಮುಂದಿನ ಜನ್ಮದಲ್ಲಿ ಅಂತ್ಯ ಕಂಡ್ರೆ ಅದು ನಮ್ಮೆಲ್ಲರ ಪುಣ್ಯ. ಇನ್ನು ಅರ್ಥವಿಲ್ಲದ, ವಿಚಿತ್ರವಾದ ಜಾಹೀರಾತುಗಳನ್ನು ನೋಡಿಯೇ ಅನುಭವಿಸಬೇಕು. ಯಾವುದೇ ಪ್ರಾಡೆಕ್ಟ್ ಮಾರುಕಟ್ಟೆಗೆ ಬಂದಾಗ ಮೊದಲಿಗಿಂತಲೂ ನಮ್ಮ ಪ್ರಾಡೆಕ್ಟ್ ಉತ್ತಮ ಎಂದು ಜಾಹೀರಾತುಗಳು ಮೂಡಿಬರುತ್ತಲೇ ಇರುತ್ತವೆ.  ಅಂದರೆ ಮೊದಲು ಕಚಡಾ, ಈಗಲೇ ಉತ್ತಮ ಎಂದು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಮೊದಲಿಗೆ ಕೊಂಡು ನಾವೇ ಬಕ್ರಾ ಆಗೋದು.   ಪ್ರತಿ ದಿನ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ತಿಂಡಿ ಮತ್ತು ಊಟದ ಸಮಯಕ್ಕೆ ಸರಿಯಾಗಿ ಟಾಯ್ಲೆಟ್ ಕ್ಲೀನರ್‍ಗಳ ಜಾಹೀರಾತುಗಳು ಪ್ರಸಾರವಾಗುತ್ತದೆ. ಇದನ್ನು ನೋಡಿದ್ರೇನೇ ತಿಂದದ್ದು ಅರಗೋದು ಎನ್ನುವಷ್ಟರ ಮಟ್ಟಿಗೆ ವೀಕ್ಷಕರು ಒಗ್ಗಿಬಿಟ್ಟಿದ್ದಾರೆ. ಹಿಂದೆಲ್ಲಾ ಟಾಯ್ಲೆಟ್ ಕ್ಲೀನರ್ ಒಂದೇ ಇರುತ್ತಿತ್ತು.  ಈಗ ಬಾತ್‍ರೂಂ ಗೆ ಒಂದು ಕ್ಲೀನರ್ ಬಂದಿದೆ.  ಮುಂದೆ ಕಿಚನ್‍ಗೆ ಒಂದು, ದೇವರಮನೆಗೆ ಒಂದು, ಫಸ್ಟ್ ಹಾಲ್‍ಗೆ ಒಂದು, ಸೆಕೆಂಡ್ ಹಾಲ್‍ಗೆ ಒಂದು, ಫಸ್ಟ್ ಬೆಡ್‍ರೂಂಗೆ ಒಂದು, ಸೆಕೆಂಡ್ ಬೆಡ್‍ರೂಂಗೆ ಒಂದು ಎಂತು ಪ್ರತ್ಯೇಕ ಕ್ಲೀನರ್‍ಗಳು ಬಂದರೂ ಅಚ್ಚರಿಪಡಬೇಕಿಲ.್ಲ ದಿನಕ್ಕೆ ನೂರಾರು ಬಾರಿ ಭಿತ್ತರವಾಗುವ ಟಾಯ್ಲೆಟ್ ಕ್ಲೀನರ್ ಜಾಹೀರಾತು ನೋಡಿ ನೋಡಿ ನೋಡುಗರಿಗೆ ಟಾಯ್ಲೆಟ್‍ನಲ್ಲಿ ತಾವು ಏನು ತೊಳೆಯಬೇಕೆಂಬುದೇ ಗೊಂದಲವಾಗಿಬಿಟ್ಟಿದೆ.  “ಎಷ್ಟೊಂದು ಉದ್ದ, ಎಷ್ಟೊಂದು ದಪ್ಪ, ಆಕಾರ ಏಕ ಪ್ರಕಾರ, ಗಾಢ ಕಪ್ಪು ಬಣ್ಣ”  ಏನಿದು ಡಬಲ್ ಮೀನಿಂಗ್ ಡೈಲಾಗ್ ಎಂದು  ಗಾಬರಿಯಾಗಬೇಡಿ.  ಇದು ಅಗರ್‍ಬತ್ತಿ ಜಾಹೀರಾತೊಂದರ ತುಣುಕು.  ಅಗರ್‍ಬತ್ತಿಗೆ ಎಂತಹ ಭರ್ಜರಿ ಡೈಲಾಗ್ ?  ವಿಚಿತ್ರವಾದ ಅಗರ್‍ಬತ್ತಿ ಜಾಹೀರಾತುಗಳಿಗೇನೂ ಕಮ್ಮಿಯಿಲ್ಲ.  ವಾಹನವೊಂದರ ಹೆಸರಿನ ಅಗರ್‍ಬತ್ತಿ ಜಾಹೀರಾತು ಪ್ರಸಾರವಾಗುತ್ತದೆ.  ಅಗರ್‍ಬತ್ತಿ ವಾಸನೆ ಕೆಟ್ಟದ್ದಾಗಿದ್ದರೆ ದೇವರೂ ಕೂಡ ಆ ವಾಸನೆ ತಡೆಯಲಾಗದೆ ಅದೇ ವಾಹನ ಹತ್ತಿಕೊಂಡು ದೇವರ ಮನೆಯಿಂದ ಎಸ್ಕೇಪ್ ಆಗಲು ಈ ಹೆಸರಿಟ್ಟಿರಬಹುದು.  ಮುಂದೆ ಒಂದೊಂದು ದೇವ್ರಿಗೆ ಒಂದೊಂದು ಅಗರ್‍ಬತ್ತಿ ಬಳಸಿ ಎಂದು ಜಾಹೀರಾತು ಬಂದ್ರೂ ಬರಬಹುದು.  ಹ್ಯಾಂಡ್‍ವಾಷ್ ಜಾಹೀರಾತುಗಳನ್ನು ನೋಡಿದರೆ ಎಲ್ಲಾ ಬೆರಳುಗಳಿಗೂ ಒಂದೊಂದು ಬಗೆಯ ಹ್ಯಾಂಡ್‍ವಾಷ್ ಬಳಸಬಹುದು.  ಬರೀ ಕೈ ತೊಳೀತಾನೇ ಇದ್ರೆ “ಕೈ ಕೆಸರಾದ್ರೆ ಬಾಯ್ ಮೊಸರು” ಎಂಬ ಗಾದೆಯೇ ಮಂಗಮಾಯವಾಗುವ ಸಾಧ್ಯತೆ ಇದೆ.  ಇನ್ನು ಇರೋ 32 ಹಲ್ಲುಗಳಿಗೆ 32 ತರಹದ ಟೂತ್‍ಪೇಸ್ಟ್ ಜಾಹೀರಾತುಗಳು ವಕ್ಕರಿಸುತ್ತವೆ.  ಇಷ್ಟೆಲ್ಲಾ ವೆರೈಟಿ ಟೂತ್‍ಪೇಸ್ಟ್ ಬಳಸಿದರೂ ಜನ ಹಲ್ಲು ನೋವೆಂದು ಮೆಂಟಲ್ ಆಗಿ ಡೆಂಟಲ್ ಡಾಕ್ಟರ್ ಬಳಿ ಅಲೆಯೋದು ತಪ್ಪಿಲ್ಲ. ಟೂಥ್‍ಪೇಸ್ಟ್ ಒಂದರ ಜಾಹೀರಾತು ಇನ್ನೂ ವಿಚಿತ್ರವಾಗಿದೆ. ಲೋಕಾಯುಕ್ತರಿಗಿಂತ ಭೀಕರವಾಗಿ ಮನೆಯೊಳಗೆ ನುಗ್ಗಿ “ನಿಮ್ಮ ಟೂಥ್‍ಪೇಸ್ಟ್‍ನಲ್ಲಿ ಉಪ್ಪಿದೆಯೇ ?” ಎಂದು ಪ್ರಶ್ನಿಸುತ್ತಾರೆ. ಏಕಾಏಕಿ ಅವರು ನುಗ್ಗಿದ್ದನ್ನು ಕಂಡು ಮನೆಯವರು ಬೆದರಿ “ನಮ್ಮದೇನಾದ್ರೂ ತಪ್ಪಿದೆಯೇ ?” ಎಂದು ಪ್ರಶ್ನಿಸಬೇಕಾಗುತ್ತದೆ. ಇನ್ನೊಂದು ಟೂತ್ ಪೇಸ್ಟ್‍ನವರು ನಿಮ್ಮ ಟೂತ್‍ಪೇಸ್ಟ್‍ನಲ್ಲಿ ನಿಂಬೆ ಇದೆಯೇ ? ಎಂದು ಪ್ರಶ್ನಿಸುತ್ತಾರೆ.  ಟೂತ್ ಪೇಸ್ಟ್‍ನಲ್ಲಿ ಉಪ್ಪು, ನಿಂಬೆಹಣ್ಣು ಇರೋಕ್ಕೆ ಅದೇನು ಚಿತ್ರಾನ್ನವೇ ಇಲ್ಲವೇ ಚಿಲ್ರೆ ಅಂಗಡಿಯೇ ?  ಸದ್ಯ ನಿಮ್ಮ ಬಾಯಲ್ಲಿ ಹಲ್ಲಿದೆಯಾ ?  ಹಲ್ಲುಜ್ಜಲು ಕೈ ಇದೆಯಾ ? ಎಂದು ಕೇಳದಿರುವುದೇ ನಮ್ಮ ಪುಣ್ಯ.  ಇನ್ನು ಕೆಲವು ಟೂತ್‍ಪೇಸ್ಟ್‍ಗಳು 99.9% ಕೀಟಾಣುಗಳನ್ನು ನಮ್ಮ ಟೂಥ್‍ಪೇಸ್ಟ್ ಕೊಲ್ಲುತ್ತದೆ ಎಂದು ಜಾಹೀರಾತನ್ನು ಪ್ರಕಟಿಸುತ್ತದೆ. ಇನ್ನುಳಿದ 1% ಕೀಟಾಣುಗಳನ್ನು ದುಡ್ಡುಕೊಟ್ಟು ತಂದ ತಪ್ಪಿಗೆ ನಾವೇ ಹುಡುಕಿ ಕೊಲ್ಲಬೇಕಾಗುತ್ತದೆ. “ಕೇವಲ ಒಂದೇ ವಾರದಲ್ಲಿ ಝಗಮಗಿಸುವ ಬಿಳುಪು ಹಲ್ಲು ನಿಮ್ಮದು” ಎಂದು ಮತ್ತೊಂದು ಟೂಥ್‍ಪೇಸ್ಟ್ ಜಾಹೀರಾತು ಪ್ರಸಾರವಾಗುತ್ತದೆ. ತಂದು ಪ್ರಯೋಗಿಸಿದರೆ ಒಂದು ವಾರದಲ್ಲಿ ಹಲ್ಲುಜ್ಜುವ ಬ್ರಷ್ ಬೆಳ್ಳಗಾಗುತ್ತದಯೇ ವಿನಃ ಹಲ್ಲಲ್ಲ. ಇನ್ನು ವಸ್ತುವೊಂದು ಕೊಂಡರೆ ಅದಕ್ಕೆ ಸಂಬಂಧವಿಲ್ಲದ ವಸ್ತುವೊಂದನ್ನು ಉಚಿತವಾಗಿ ನೀಡೋದು ಇನ್ನೂ ವಿಚಿತ್ರವೆನಿಸುತ್ತದೆ.  ಟೂತ್‍ಪೇಸ್ಟ್ ಕೊಂಡರೆ ಟಾಕ್ ಟೈಮ್ ಉಚಿತವೆಂದು ಮತ್ತೊಂದು ಜಾಹೀರಾತು ಪ್ರಕಟವಾಗುತ್ತದೆ. ಹುಡುಗ ತನ್ನ ಪ್ರೇಯಸಿಗೆ “ತಾನು ದೇವ್ರಾಣೆ ಹಲ್ಲುಜ್ಜಿದ್ದೇನೆ, ನೀನು ಧೈರ್ಯವಾಗಿ ನನ್ನ ಬಳಿ ಬಾ” ಎಂದು ತಿಳಿಸಲು ಈ ಟಾಕ್‍ಟೈಮ್ ಬಳಸಿಕೊಳ್ಳಬಹುದು. 2 ಸೋಪ್ ಕೊಂಡರೆ ಒಂದು ಪೆನ್ ಉಚಿತವೆಂದು ಮತ್ತೊಂದು ಜಾಹೀರಾತು ಪ್ರಸಾರವಾಗುತ್ತದೆ. ಪೆನ್ನಿಗೂ ಸೋಪಿಗೂ ಎಲ್ಲಿಯ ಸಂಬಂಧವೆಂದು ನಾವು ಅಂದುಕೊಂಡರೂ ಅಪರೂಪಕ್ಕೊಮ್ಮೆ ಸ್ನಾನ ಮಾಡುವವರು ಡೇಟ್ ಗುರುತು ಹಾಕಲಿ ಎಂದು ಪೆನ್ ಕೊಡುವ ಸದಾಲೋಚನೆಯೂ ಕಂಪನಿಯವರಿಗಿರಬಹುದು.  ಇದರ ಬದಲಿಗೆ ಸೋಪಿಗೊಂದು ಅಯೋಡಿಕ್ಸ್ ಉಚಿತವಾಗಿ ನೀಡಿದರೆ ಉಪಯೋಗವಾದ್ರೂ ಆಗಬಹುದು.  ಏಕೆಂದರೆ ಆ ಕಂಪನಿಯ ಸೋಪು ತಿಕ್ಕಿ ತಿಕ್ಕಿ ಕೈ ನೋವು ಬಂದಿರುವುದರಿಂದ ಅಯೋಡಿಕ್ಸ್ ಹಚ್ಚಿ ನೋವು ಕಮ್ಮಿಮಾಡಿಕೊಳ್ಳಬಹುದು.  ಇನ್ನೊಂದು ಸೋಪ್ ಕಂಪನಿಯವರು ತಮ್ಮ ಕಂಪನಿಯ ಸೋಪ್ ಕೊಂಡರೆ 10 ರೂ. ಟಾಕ್‍ಟೈಮ್ ಉಚಿತ ಪಡೆಯಿರಿ ಎನ್ನುತ್ತದೆ.  ಇದು ಒಂದು ರೀತಿ ಒಳ್ಳೆಯದೇ. ಏಕೆಂದರೆ ಕೊಳೆ ಹೋಗದಿದ್ದರೆ ಅದೇ ಟಾಕ್‍ಟೈಮ್‍ನಿಂದ ಕಂಪನಿಯವರಿಗೆ ಉಗಿದು ತಮ್ಮ ಕೋಪ ತಣಿಸಿಕೊಳ್ಳಬಹುದು.   ಅದೇ ರೀತಿ ಟೀ ಕಂಪನಿಯೊಂದು ನಮ್ಮ ಕಂಪನಿಯ ಟೀ ಕೊಂಡರೆ ಉಚಿತ ಟಾಕ್‍ಟೈಂ ಎಂದು ಜಾಹೀರಾತು ಪ್ರಕಟಿಸುತ್ತದೆ.   ಟೀ ಏನಾದ್ರೂ ಕೆ.ಟಿ. (ಕಚಡಾ ಟೀ) ಆದ್ರೆ ಅದೇ ಟಾಕ್‍ಟೈಮ್ ನಿಂದ ಕಂಪನಿಯವರನ್ನು ತರಾಟೆಗೆ ತೆಗೆದುಕೊಳ್ಳಬಹುದು. ? ಇನ್ನೊಂದು ಟೀ ಕಂಪನಿಯವರು “ಎತ್ತರಕ್ಕೆ ಹೋದಷ್ಟು ಚಹಾದ ಸ್ವಾದ ಉತ್ತಮವಾಗಿರುತ್ತದೆ” ಎಂದು ತೋರಿಸುತ್ತದೆ.  ಈ ಚಹಾದ ಸ್ವಾದಕ್ಕೋಸ್ಕರ ಸತ್ತು ಮೇಲೆ ಹೋಗಬೇಕಷ್ಟೆ. ಶುದ್ಧ ನೀರು ಕುಡಿಯಿರಿ ಎಂದು ಎಲ್ಲಾ ಕಂಪನಿಗಳು ತಮ್ಮ ಫಿಲ್ಟರ್ ಜಾಹೀರಾತುಗಳಿಂದ ನೋಡುಗರಿಗೆ ನೀರಿಳಿಸಿಬಿಡುತ್ತಿವೆ.  ನಮ್ಮ ಫಿಲ್ಟರ್ ಎರಡು ಬಾರಿ ಶುದ್ಧೀಕರಿಸುತ್ತೆ ಎಂದು ಒಂದು ಕಂಪನಿ ಹೇಳಿದರೆ, ಮತ್ತೊಂದು ನಮ್ಮದು ಮೂರು ಬಾರಿ, ನಮ್ಮದು ನಾಲ್ಕು ಬಾರಿ, ನಮ್ಮದು ಐದು ಬಾರಿ ಹೀಗೆ ಶುದ್ಧೀಕರಣ ಕ್ರಿಯೆ ಮುಂದುವರೆಯುತ್ತಲೇ ಇರುವುದರಿಂದ ನಾವೀಗ ಕುಡಿಯುತ್ತಿರೋದೂ ಇನ್ನೂ ಶುದ್ಧ ನೀರಲ್ಲವೆಂಬುದು ಮನವರಿಕೆಯಾಗುತ್ತದೆ.  ನೀರಿನಲ್ಲಿನ ಅಷ್ಟೂ ಅಂಶಗಳನ್ನು ಎಳೆದು ಬಿಸಾಡೋ ಈ ಫಿಲ್ಟರ್‍ಗಳ ನೀರನ್ನು ಅಭ್ಯಾಸ ಮಾಡಿಕೊಂಡರೆ, ಅಪ್ಪಿತಪ್ಪಿ ಹೊರಗಡೆ ಒಂದು ಹನಿ ನೀರು ಕುಡಿದರೂ ಸಹ ಮೂಗು, ಬಾಯಿ, ಗಂಟಲುಗಳು ತತ್‍ಕ್ಷಣ ತಮ್ಮ ಕೆಲಸ ನಿಲ್ಲಿಸಿ ಅನಿರ್ಧಿಷ್ಟ ಮುಷ್ಕರ ಆರಂಭಿಸಿಬಿಡುವುದರಿಂದ ಇಎನ್‍ಟಿ ಡಾಕ್ಟರಿಗೆ ಸುಗ್ಗಿಯೋ ಸುಗ್ಗಿ. ಹೇರ್ ಆಯಿಲ್ ಜಾಹೀರಾತುಗಳ ವಿಷಯಕ್ಕೆ ಬಂದರೆ ಅದಕ್ಕೂ ಇದೇ ಗತಿ.  ಇಂದು ಹೇರ್‍ಆಯಿಲ್ ಬಾಟಲ್‍ಗಳನ್ನು ನೋಡಿದ್ರೆ ಅದು ಆಯುರ್ವೇದದ ಗ್ರಂಥಿಗೆ ಅಂಗಡಿಯೇನೋ ಎಂಬಂತೆ ಭಾಸವಾಗುತ್ತದೆ.  ಅಷ್ಟು ಗಿಡಮೂಲಿಕೆಗಳು ಅದರಲ್ಲಿ ತುಂಬಿ ತುಳುಕುತ್ತಿರುತ್ತವೆ.  ಅದೇನು ಹೇರ್ ಆಯಿಲ್ಲೋ ?  ಇಲ್ಲವೇ ಆಯುರ್ವೇದದ ಮುಲಾಮೋ ? ಎಂಬ ಗುಮಾನಿ ಮೂಡುತ್ತದೆ.  ನಮ್ಮ ಕಂಪನಿಯ ಹೇರ್ ಆಯಿಲ್ ನಿಮ್ಮ ತಲೆಯ ಬುಡಕ್ಕೇ ಹೋಗಿ ಬೇರಿನಿಂದಲೇ ಗಟ್ಟಿಗೊಳಿಸುತ್ತದೆ ಎಂದು ಕಂಪನಿ ಪದೇ ಪದೇ ಹೇಳೋದನ್ನು ನೋಡಿದರೆ ಇದು ತಲೆ ಇದ್ದೋರಿಗೆ ಮಾತ್ರ ಎಂಬುದು ಆಮೇಲೆ ತಿಳಿಯುತ್ತದೆ. ತಲೆ ಕೂದಲು ಉದುರೋದು ಪುರುಷರಿಗೆ ಒಂದು ದೊಡ್ಡ ಸಮಸ್ಯೆ.  ಜಾಹೀರಾತುಗಳಿಗೆ ಮಾರು ಹೋಗಿ ಆ ಹೇರ್‍ಆಯಿಲ್‍ನ್ನು ಮನೆಗೆ ತಂದ ಪುರುಷೋತ್ತಮರು ನೈಸ್ ರೋಡಾಗಿರೋ ತಮ್ಮ ತಲೆಯೂ ಬನ್ನೇರುಘಟ್ಟವಾಗ ಬಹುದೇನೋ ಎಂಬ ಕನಸಿನಿಂದ ತಲೆಗೆ ತಿಕ್ಕಿ ತಿಕ್ಕಿ ಇರೋ ನಾಲ್ಕು ಕೂದಲನ್ನೂ ಕಳೆದುಕೊಂಡವರ ಸಂಖ್ಯೆ ದೊಡ್ಡದೇ ಇದೆ. ಎಷ್ಟೋ ಮಂದಿ ತಲೆಗೆ ಹೇರ್ ಆಯಿಲ್ ತಿಕ್ಕಿ ತಿಕ್ಕಿ ತಲೆ ಬದಲು ಕೈಯಲ್ಲಿ ಕೂದಲು ಬಂದ ಉದಾಹರಣೆಗಳೂ ಇವೆ.  ಈ ಚಿತ್ರವಿಚಿತ್ರ ಹೇರ್‍ಆಯಿಲ್‍ನ ಬಳಕೆಯಿಂದ ಆಗೋ ಏಕೈಕ ಪ್ರಯೋಜನವೆಂದರೆ ಇರೋ ನಾಲ್ಕು ಕೂದಲು ಇತಿಹಾಸ ಸೇರಿ ಗಂಡನ ತಲೆ ರೋಮಿಂಗ್ ಫ್ರೀ ಆಗಿಬಿಡುವುದರಿಂದ ಆತನ ಜುಟ್ಟು ಯಾವ ಕಾರಣಕ್ಕೂ ಹೆಂಡತಿಯ ಕೈಗೆ ಸಿಗೋ ಅವಕಾಶ ಇರೋದಿಲ್ಲ.   ಈ ಹೇರ್ ಆಯಿಲ್‍ಗಳಿಗೆ ಬಾಚಣಿಗೆ ಫ್ರೀ, ಶ್ಯಾಂಪೂ ಫ್ರೀ ಎಂಬ ಆಮಿಷ ಬೇರೆ.  ಅದರ ಬದಲು ಹೇರ್ ಆಯಿಲ್‍ನೊಂದಿಗೆ ಒಂದು ಪುಟ್ಟ ಡಬ್ಬಿ ಉಚಿತವಾಗಿ ಕೊಟ್ಟರೆ ಉದುರಿದ ಕೂದಲನ್ನು ಅದರಲ್ಲಿ ನಮ್ಮ ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಸಂಗ್ರಹಿಸಿಡಬಹುದು.  ತಮ್ಮ ತಲೆ ಕೂದಲ ಚಿಗುರುವ ಕನಸು ನನಸಾಗಿಸಿಕೊಳ್ಳಲು ಈ ಹೇರ್‍ಆಯಿಲ್‍ಗಳಿಗೆ ದುಡ್ಡು ಸುರಿಯೋ ಬದಲು ಅದಕ್ಕಿಂದ ಕಮ್ಮಿ ಖರ್ಚಿನಲ್ಲಿ ತಾವು ಸತ್ರೂ ಅಮರವಾಗಿ ಉಳಿಯುವಂತಹ ವಿಗ್ ಧರಿಸಿ `ವಿಗ್’ನೇಶ್ವರನಾಗೋದೇ ಕ್ಷೇಮವೆಂಬ ಸತ್ಯ ಪುರುಷೋತ್ತಮರಿಗೆ ತಡವಾಗಿ ಅರ್ಥವಾಗುತ್ತದೆ.  ವಿಷನಾದ್ರೂ ಸ್ವಲ್ಪ ರುಚಿ ಇರಬಹುದು, ಆದರೆ ಬಣ್ಣ, ರುಚಿ, ಯಾವ ಸುಡುಗಾಡೂ ಇಲ್ಲದ ಸೋಡಾದ ಬಗ್ಗೆ “ನಮ್ಮದು ಅದ್ಭುತ ರುಚಿ, ತುಂಬಾ ಸ್ಟ್ರಾಂಗ್, ನಮ್ಮ ಸೋಡಾನೇ ಕುಡೀರಿ” ಎಂದು ಜಾಹೀರಾತು ಪ್ರಕಟವಾಗಿರುತ್ತದೆ.  ಸೋಡಾಗೆ ಜಾಹೀರಾತು ಬೇಕಿತ್ತೇ ? ಇನ್ನು ಪುರುಷರಿಗೆ ಸಂಬಂಧಪಟ್ಟ ವಸ್ತುಗಳ ಜಾಹೀರಾತಿನಲ್ಲೂ ಮಹಿಳೆಯರದ್ದೇ ಕಾರುಬಾರು.   ಪುರುಷರ ಶೇವಿಂಗ್ ಕ್ರೀಮ್, ಪುರುಷರ ಅಂಡರ್‍ವೇರ್, ಪುರುಷರ ಸೂಟಿಂಗ್-ಷರ್ಟಿಂಗ್ ಹೀಗೆ ಯಾವುದೇ ಪುರುಷರಿಗೆ ಸಂಬಂಧಪಟ್ಟ ಜಾಹೀರಾತುಗಳು ಪ್ರಸಾರವಾಗುತ್ತಿದ್ದರೆ  ದಿಢೀರನೆ ಈ ನಾರಿಮಣಿಯರು ಒಕ್ಕರಿಸುತ್ತಾರೆ.  ಪುರುಷರು ನೆಮ್ಮದಿಯಾಗಿ ಒಂದು ಬಾರಿ ಶೇವಿಂಗ್ ಮಾಡಿಕೊಳ್ಳುವುದೂ ಮರೀಚಿಕೆಯಾಗುತ್ತಿದೆ.   ಸಾಬೂನು ಜಾಹೀರಾತುಗಳಲ್ಲೂ ಮಹಿಳೆಯರದ್ದೇ ಕಾರುಬಾರು.  ಜಗತ್ತಿನಲ್ಲಿ ಕೇವಲ ಮಹಿಳೆಯರಷ್ಟೇ ಸ್ನಾನ ಮಾಡೋದು ಎಂಬಂತೆ ಬಿಂಬಿಸಲಾಗುತ್ತದೆ.  ಇಲ್ಲಿ ಪುರುಷರಿಗೆ ಬೆಲೆಯೇ ಇಲ್ಲ.  ಈ ಜಾಹೀರಾತುಗಳನ್ನು ನೋಡುತ್ತಿದ್ದರೆ ಪುರುಷರು ಅಪರೂಪಕ್ಕೆ ಸ್ನಾನ ಮಾಡುವವರು, ಕೆಟ್ಟಾ ಕೊಳಕರು ಎಂಬ ಭಾವನೆ ಮೂಡದೇ ಇರೋಲ್ಲ.  ತಲೆನೋವು ನಿವಾರಕಗಳ ಜಾಹೀರಾತುಗಳೇ ವೀಕ್ಷಕರಿಗೆ ತಲೆ ನೋವು ತರಿಸುತ್ತವೆ.  ಒಂದು ತಲೆ ನೋವು (ತಲೆ ಇದ್ರೆ) ಹೋಗೋದೆ ಕಷ್ಟ, ಅಂತಹದ್ದರಲ್ಲಿ ರಾಮಾಯಣದ ರಾವಣನನ್ನು ತಲೆ ನೋವಿನ ಜಾಹೀರಾತಿಗೆ ಬಳಸಿಕೊಂಡು “ನಮ್ದು 10 ತಲೆ ನೋವು ವಾಸಿ ಮಾಡುತ್ತೆ” ಅಂತ ಕಿವಿ ಮೇಲೆ ಕೆಂಪು ದಾಸವಾಳ ಇಡ್ತಾರೆ.  ತ್ರೇತಾಯುಗದ ರಾವಣನಿಗೆ ಕಲಿಯುಗದಲ್ಲೂ ತಲೆನೋವು ಕಾಡುತ್ತಿರುವುದನ್ನು ಕಂಡು ಅನುಕಂಪ ಮೂಡುತ್ತದೆ.   ಕೆಲವು ಕಂಪನಿಗಳು ಇದು ಅಮ್ಮ ಮಾಡಿದ (ಅಮ್ಮಾ ಇಲ್ದೇ ಇದ್ರೆ ?) ತುಪ್ಪದ ತರಾನೇ ಅಂತ ತಮ್ಮದೇ ಶುದ್ಧವಾದ ತುಪ್ಪ ಬಳಸಿ ಎಂದು ವೀಕ್ಷಕರಿಗೆ ಕೆರಳಿಸುತ್ತವೆ.  ಈ ತುಪ್ಪ ತಂದು ಮೂಗಿನಲ್ಲಿ ತುರುಕಿದರೂ ತುಪ್ಪದ ವಾಸನೆ ಬಂದರೆ ನಮ್ಮ ಪುಣ್ಯ. ಫೇರ್‍ನೆಸ್ ಕ್ರೀಮ್ ಕಂಪನಿಯವರಂತೂ ಹಠಕ್ಕೆ ಬಿದ್ದವರಂತೆ ಜಾಹೀರಾತು ಪ್ರಸಾರ ಮಾಡುತ್ತಾ ಕೇವಲ ಒಂದೇ ವಾರದಲ್ಲಿ ಅಸಲಿ ಬಣ್ಣ ಪಡೆಯಬಹುದೆಂದು ಗ್ರಾಹಕರನ್ನು ಹುರಿದುಂಬಿಸುತ್ತವೆ. ಒಂದು ವಾರ ಕಳೆದ ಮೇಲೆ ಕಂಪನಿಯ ಅಸಲಿ ಬಣ್ಣ ನಮಗೆ ಪರಿಚಯವಾಗುತ್ತದೆ. ಜನಪ್ರಿಯ ನಟರೊಬ್ಬರು “ಮನೆಯಲ್ಲಿ ಯಾಕೆ ದುಡ್ಡು ಇಡ್ತೀರಾ, ಚಿನ್ನ ತನ್ನಿ” ಎಂದು ಜಾಹೀರಾತು ಪ್ರಸಾರವಾದರೆ, ಇನ್ನೊಬ್ಬ ನಟ “ಚಿನ್ನ ಮನೆಯಲ್ಲಿದ್ದರೆ ಚಿಂತೆ ಏಕೆ, ಚಿನ್ನ ಅಡವಿಟ್ಟು ಸಾಲ ತನ್ನಿ” ಎಂದು ಕಿವಿಮಾತು ಹೇಳಿದಾಗ ಏನೂ ತೋಚದ ವೀಕ್ಷಕ ಟಿ.ವಿ.ಗೆ  ತಲೆ ಜಜ್ಜಿಕೊಳ್ಳಬೇಕಾಗುತ್ತದೆ.  ಜೀವ ವಿಮಾ ಕಂಪನಿಯೊಂದರ ಜಾಹೀರಾತು ಅಪ್ಪಂದಿರುಗಳಿಗೆ ಸ್ವರ್ಗಕ್ಕೆ ಕಳುಹಿಸಲೆಂದೇ ಪ್ರಸಾರವಾಗುತ್ತದೆ. ಮಗ ಕೇಳುತ್ತಾನೆ “ಅಪ್ಪ ನೀನಿಲ್ಲದಿದ್ರೆ ಮುಂದೆ ನನ್ನ ಗತಿ” ಎಂದು. ಅಪ್ಪ ಕೂಲಾಗಿ ಹೇಳ್ತಾನೆ “ಕೂದಲು ಕತ್ತರಿಸಿಕೋ” ಎಂದು. ಅಲ್ಲಿಗೆ ಜೀವ ವಿಮಾ ಕಂಪನಿ ಬೆಳೆಸಲು ಅಪ್ಪ ಸ್ವರ್ಗಕ್ಕೆ ರೈಟೇಳಲು ಸೂಟ್‍ಕೇಸ್ ರೆಡಿಯಾಗಿಟ್ಟುಕೊಳ್ಳಬೇಕೆಂದು ಇದರರ್ಥ. ಇನ್ನೊಂದು ವಿಮಾ ಕಂಪನಿಯವರು ಹೇಳಿದ್ದನ್ನು ನಾವು ಏಳು ಜನ್ಮವೆತ್ತಿ ಬಂದರೂ ಅರ್ಥವಾಗುವುದಿಲ್ಲ. ಏಕೆಂದರೆ ಶಬ್ದ ವೇಗಕ್ಕಿಂತಲೂ ಹೆಚ್ಚು ವೇಗದಲ್ಲಿ ತಮ್ಮ ವಿಮಾ ವಿಚಾರವಾಗಿ ಹೇಳುವುದರಿಂದ ಯಾವ ಪುಣ್ಯಾತ್ಮನಿಗೂ ಅದು ಅರ್ಥವಾಗುವುದಿಲ್ಲ. ಶಾಂಪೂಗಳ ಜಾಹೀರಾತು ನೋಡಿದರೆ ಕೂದಲಿಗೊಂದು ಶಾಂಪು ಬಳಸಬೇಕಾಗುತ್ತದೆ. ಸದೃಢ ಕೂದಲಿಗೆ ನಮ್ಮದೇ ಶಾಂಪು ಬಳಸಿ ಎಂದು ಹೇಳುತ್ತಾ ನಾರೀಮಣಿಯೊಬ್ಬಳು ಈ ಶಾಂಪೂ ಬಳಸಿ ತನ್ನ ಕೂದಲಿನಿಂದಲೇ ವಾಹನವನ್ನು ಎಳೆಯುವುದು ಕಂಡು ಗಾಬರಿಯಾಗುವ ಸರದಿ ವೀಕ್ಷಕನದ್ದು. ಅಲ್ಲದೆ ಶಾಂಪೂ ಬೆಲೆ ಪೆಟ್ರೋಲ್ ಬೆಲೆಗಿಂತ ಕಡಿಮೆ ಇರೋದರಿಂದ ಕಡಿಮೆ ವೆಚ್ಚದಲ್ಲಿ ಈ ಶಾಂಪೂ ಬಳಸಿ ತಮ್ಮ ಪತ್ನಿಯ ಸದೃಡ ಕೂದಲಿನ ಸಹಾಯದಿಂದ ತಮ್ಮ ವಾಹನವನ್ನು ಕಡಿಮೆ ಖರ್ಚಿನಲ್ಲಿ ಬಳಸಬಹುದು.  ಕೇವಲ 50 ಪೈಸೆ ಶಾಂಪೂವನ್ನು ಮಾರುಕಟ್ಟೆಗೆ ಬಿಡಲಾಗಿದೆ.  ಇದು ಬೆರಳೆಣಿಕೆಯ ಕೂದಲಿರುವ ಬೊಕ್ಕತಲೆಯವರಿಗೆ ಬಹಳ ಅನುಕೂಲ.  ಸುಮ್ಮನೆ ಅವರ ತಲೆಗ್ಯಾಕೆ 3 ರೂ ಎಂದು ಕಂಪನಿಯವರೇ ಈ ತೀರ್ಮಾನ ತೆಗೆದುಕೊಂಡಿರುವುದು ಸಂತಸದ ವಿಷಯ.   ಹೇರ್‍ಕಲರ್ ಜಾಹೀರಾತುಗಳಿಂದ ಪ್ರಭಾವಿತರಾದ ವೀಕ್ಷಕರು ತಮ್ಮ ತಲೆಗೆ ದಿನಕ್ಕೊಂದು ಬಣ್ಣ ಬಳಿಯತೊಡಗಿದ್ದಾರೆ. ಇಂದು ವೀಕ್ಷಕರ ತಲೆಯಲ್ಲಿ ಏನಿಲ್ಲವೆಂದರೂ ಬಣ್ಣವಂತೂ ಇದ್ದೇ ಇರುತ್ತದೆ. ಹೇರ್ ಕಲರ್ ಹಾವಳಿಯಿಂದ ಇಂದು ಮನೆಯಲ್ಲಿ ತಾತ, ಅಜ್ಜಿ, ಅಮ್ಮ, ಅಣ್ಣ ಯಾರೆಂದು, ಹಿರಿಯರು-ಕಿರಿಯರು ಯಾರೆಂದು ಗುರುತಿಸುವುದೇ ಕಷ್ಟಕರವಾಗಿದೆ.  ಹಳೇ ಆಲ್ಬಂ ಇಲ್ಲವೇ ವಂಶವೃಕ್ಷ ಹಿಡಿದುಕೊಂಡು ಹೊಸಬರು ಇವರನ್ನು ಗುರುತಿಸಬೇಕಾಗಿದೆ.  ಎಲ್ಲರಿಗೂ ಬಣ್ಣದ ಹುಚ್ಚು ವಿಪರೀತವಾಗಿಬಿಟ್ಟಿದೆ.   ಇತ್ತೀಚಿಗೆ ಹೇರ್‍ಕಲರ್ ಕೊಂಡರೆ ಸೊಳ್ಳೆ ಬತ್ತಿ ಫ್ರೀ ಎಂದು ಮತ್ತೊಂದು ಜಾಹೀರಾತು ಪ್ರಸಾರವಾಗುತ್ತಿದೆ.  ಬಣ್ಣಕ್ಕೂ, ಸೊಳ್ಳೆಗೂ ಏನು ಸಂಬಂಧವೆಂದು ಗಲಿಬಿಲಿಗೊಂಡ ಗ್ರಾಹಕ ಇಲ್ಲಾ ಬಣ್ಣ ಹಚ್ಚಬೇಕು, ಇಲ್ಲಾ ಸೊಳ್ಳೆ ಬತ್ತಿ ಹಚ್ಚಬೇಕಷ್ಟೆ.  ಸೊಳ್ಳೆ ಕಾಟದಿಂದ ಮುಕ್ತರಾಗಲು ತಮ್ಮ ಕಂಪನಿಯ ಆಕ್ಟಿವ್ ಮೋಡ್ ಮತ್ತು ನಾರ್ಮಲ್ ಮೋಡ್ ಬಳಸಿ ಎಂದು ಜಾಹೀರಾತು ಹೇಳುತ್ತದೆ. ಇಲ್ಲೇ ಇರೋದು ಕಂಪನಿಯವರ ಜಾಣ್ಮೆ. ಸೊಳ್ಳೆ ಕಾಟಕ್ಕೆ ಆಕ್ಟಿವ್ ಮೋಡ್‍ಗೆ ನಾವೇನಾದ್ರೂ ಹೋದ್ರೆ ತಿಂಗಳು ಬರುವಂತಹ ಲಿಕ್ವಿಡ್ ಹದಿನೈದು ದಿನಕ್ಕೇ ಖಾಲಿ. ಅಲ್ಲಿಗೆ ವೀಕ್ಷಕ ಗುಡ್‍ನೈಟ್‍ರವರ ಬಲೆಗೆ ಬಿದ್ದು ‘ಆಲ್‍ಔಟ್’ ಆಗೋದು ಖಚಿತ. ತಮ್ಮ ಮಕ್ಕಳ ಬೆಳವಣಿಗೆಗೆ ನಮ್ಮ ಕಂಪನಿಯ ಪೌಡರನ್ನೇ ಬಳಸಿ ಎಂದು ಜಾಹೀರಾತು ಪ್ರಸಾರವಾಗುತ್ತಲೇ ಇರುತ್ತದೆ. ಆದರೆ ಮಕ್ಕಳಿಗಿಂತ ಹೆಚ್ಚು ಕಂಪನಿಯ ಪೌಡರ್ ಡಬ್ಬಿಯೇ ಅಟ್ಟದ ಮೇಲೆ ದಿನೇ ದಿನೇ ಬೆಳೆಯತೊಡಗುತ್ತದೆ. ವಿಭಿನ್ನ ವಾಷಿಂಗ್‍ಮೆಷಿನ್‍ಗಳ ಜಾಹೀರಾತುಗಳಿಗೆ ಮರುಳಾಗಿ ನಾರಿಮಣಿಯರು ಅವನ್ನು ಮನೆಗೆ ತಂದು ಪ್ರಯೋಗಿಸಿದರೆ ಎರಡೇ ದಿನಕ್ಕೆ ಗೊತ್ತಾಗಿ ಬಿಡುತ್ತೆ ತಮ್ಮ ಗಂಡಂದಿರ ಬೆಲೆ ಏನೆಂದು. ಏಕೆಂದರೆ ಗಂಡಂದಿರ ಕೈ ಮುಂದೆ ಯಾವ ವಾಷಿಂಗ್ ಮಿಷನ್ ಕೂಡ ಪೈಪೋಟಿಗೆ ನಿಲ್ಲಲಾರದು. ಡಿಯೋಡರೆಂಟ್ ಜಾಹೀರಾತುಗಳು ಚಿತ್ರವಿಚಿತ್ರವಾಗಿರುತ್ತವೆ. ಡಿಯೋಡ್ರೆಂಟ್ ಸ್ಪ್ರೇ ಮಾಡಿಕೊಂಡ ತಕ್ಷಣ ವ್ಯಕ್ತಿಯೊಬ್ಬನಿಗೆ ಅರೆವಸ್ತ್ರ ಕನ್ಯಾರತ್ನಗಳು ಮುತ್ತಿಗೆ ಹಾಕಿದಾಗ ಆತ ಹುಚ್ಚು ನಾಯಿಯಂತೆ ಓಡತೊಡಗುತ್ತಾನೆ.  ಡಿಯೋಡ್ರೆಂಟ್ ವಾಸನೆಗೆ ಆತನ ಬಳಿ ಓಡುತ್ತಾರೋ ? ಇಲ್ಲವೇ ಆ ಗಬ್ಬುನಾತ ತಾಳಲಾರದೆ ಆತನನ್ನು ನಾಲ್ಕು ತದುಕಲು ಆತನ ಬಳಿ ಓಡುತ್ತಾರೋ ಅವರನ್ನೇ ಕೇಳಬೇಕಷ್ಟೆ.  ಬರೀ ಗ್ಯಾಸ್ ತುಂಬಿರುವ ‘ಗ್ಯಾಸ್ ಟ್ರಬಲ್’ ಡಿಯೋಡರೆಂಟ್ ತಂದು ಬಳಸಿದರೆ ನಾರಿಯರಿರಲಿ ವಾಸನೆ ಬಂದ್ರೆ ನಮ್ಮ ಪುಣ್ಯ. ಮೂವರು ಮಹಾನುಭಾವರು ಸಾಫ್ಟ್ ಡ್ರಿಂಕ್ಸ್ ಕುಡಿದು ಬೆಟ್ಟದಿಂದ ಹಾರುತ್ತಾರೆ. ಇದು ಸಾಫ್ಟ್ ಡ್ರಿಂಕ್ಸ್ ಒಂದರ ಜಾಹೀರಾತು.  ಅದನ್ನು ಕುಡಿದು ಬದುಕೋದಕ್ಕಿಂತ ಮೇಲಿಂದ ಬಿದ್ದು ಸಾಯೋದೇ ಮೇಲು ಅಂತ ನಾವು ಅರ್ಥೈಸಿಕೊಳ್ಳಬೇಕಷ್ಟೆ. ಹೀಗೆ ಚಿತ್ರ-ವಿಚಿತ್ರ ಜಾಹೀರಾತುಗಳ ಬಗ್ಗೆ ಬರೆಯುತ್ತಾ ಹೋದರೆ ಅದೊಂದು ಮುಗಿಯದ ರಾಮಾಯಣ.
– ಎಲ್.ವಿ. ಕುಮಾರಸ್ವಾಮಿ.

Leave a Comment