`ಚೇಂಜ್’ ಇಂಡಿಯಾ ಚೇಂಜ್

j4ಅಂತೂ 2016 ಮುಗೀತು. ನೋಟಿನ ರಾದ್ದಾಂತದೊಂದಿಗೆ ವರ್ಷಾಂತ್ಯವಾಯಿತು. ರಾತ್ರೋ ರಾತ್ರಿ ಪ್ರಧಾನಿ ಮೋದಿಯವರು 500, 1000 ರೂ. ನೋಟನ್ನು ಡಿಲೀಟ್ ಮಾಡಿ ಭಾರತವನ್ನು `ಚೇಂಜ್’ ಮಾಡಿಯೇ ಬಿಟ್ಟರು. ನವಂಬರ್‍ನಲ್ಲಾದ ಸುನಾಮಿಯಿಂದ ಏಕಾಏಕಿ ಏಕಾಏಕಿ 500 ಮತ್ತು 1000 ರೂ. ಗಳು ನಿಷೇಧಕ್ಕೊಳಗಾಗಿ ಮದುವೆಯಾದ ಗಂಡಿನಂತೆ, ಈರುಳ್ಳಿ-ಟೊಮ್ಯಾಟೋ ಬೆಲೆಯಂತೆ, ಡಬ್ಬಾ ಸಿನಿಮಾದಂತೆ, ದರಿದ್ರ ಸೀರಿಯಲ್‍ನಂತೆ, ಕೆಟ್ಟ ಅಡುಗೆಯಂತೆ ತನ್ನ ಬೆಲೆ ಕಳೆದುಕೊಂಡಿದ್ದರಿಂದ ಎಲ್ಲರ ಜೇಬಿನಲ್ಲಿ ತಮ್ಮ ಹಳೆ ನೋಟು ವಿನಿಮಯ ಮಾಡಿಕೊಂಡು 10, 20 ರ ಕಟ್ಟಿನ ಜೇಂಜ್ ರಾರಾಜಿಸುವಂತಾಯಿತು. ಸಾವಿರದ ನೋಟುಗಳಿಗೂ ಸಾವು ಬಂತು. ಎಲ್ಲರ ಜೇಬಲ್ಲಿ ಸಂತಸದಿಂದ ಆಡುತ್ತಿದ್ದ ಐನೂರರ ಕನಸೂ ನುಚ್ಚುನೂರಾದವು. ಅಂತರ್ರಾಷ್ಟ್ರೀಯ ಮಾರಕಟ್ಟೆಯಲ್ಲಿ ರೂಪಾಯಿ ಮೌಲ್ಯ ಭಾರೀ ಕುಸಿತ ಕಂಡಿತು. ಪದೇ ಪದೇ ರೂಪಾಯಿ ಮೌಲ್ಯ ಕುಸಿಯುತ್ತಲೇ ಇರುವುದರಿಂದಲೇ ಕೆಲ ಒಳಉಡುಪುಗಳಿಗೆ ಡಾಲರ್ ಎಂದು ಹೆಸರಿಟ್ಟಾದ್ದಾರೆಂದು ರೂಪಾಯಿ ಅಂತ ಹೆಸರಿಟ್ಟಿದ್ರೆ ಅದು ಸೊಂಟದಿಂದ ಜಾರಿ ಬಿಡುವುದೆಂದು ಕೆಲವರು ಮುಸಿ ಮುಸಿ ನಕ್ಕರು. ಕಾಳಧನಿಕರಿಗಂತೂ ಮೋದಿ ಎಂದಾಕ್ಷಣ ಬೇಧಿ ಶುರುವಾಯಿತು. ‘ಇಟಜoಠಿಚಿಡಿ’ ಹಿಡಿಗಟ್ಟಲೆ ನುಂಗಿದ್ರೂ ಅದರಿಂದ ಪಾರಾಗಲಿಲ್ಲ. ಒಂದೇ ದಿನದಲ್ಲಿ ಚಿಲ್ರೆ ಇರೋ ಭಿಕ್ಷುಕರು ಶ್ರೀಮಂತರಾಗಿ ಕಾಣಸಿದರೆ, ಚಿಲ್ರೆ ಇಲ್ಲದೇ ಚಿಲ್ರೆ ಬುದ್ಧಿ ತೋರಿಸುತ್ತಿದ್ದಶ್ರೀಮಂತರು ಭಿಕ್ಷುಕರಿಗಿಂತಲೂ ಕಡೆಯಾಗಿ ಹೋದರು. ದಿಢೀರಾಗಿ ನಮ್ಮ ದೇಶ ಚಿಲ್ರೆ ಆಗೋಯ್ತು. 500, 1000 ರೂ. ನೋಟು ಹೊಂದಿದ್ದವರ ಬಳಿ ಜನ ಅವರಿಗೆ ಮಾರಕ ರೋಗ ಅಟ್ಕಾಯಿಸಿಕೊಂಡಿದೆಯೇನೋ ಎಂಬಂತೆ ದೂರವಿರತೊಡಗಿದರು. ಬೀದಿ ತುಂಬ ಚಿಲ್ರೆ ಜನ ತುಂಬಿ ತುಳುಕತೊಡಗಿದರು. ಐನೂರು ನಿಷಿದ್ಧಗೊಂಡಿದ್ದರಿಂದ ಐನೋರು ಮುನಿಸಿಕೊಂಡರೆ, ನೂರುಲ್ಲಾ, ನೂರ್‍ಫಾತಿಮಾ, ನೂರಿ, ನೂರ್‍ಜಾನ್, ನೂರ್‍ಬೇಬಿ, ನೂರ್‍ಅಹ್ಮದ್, ನೂರ್‍ಸಾಬ್ ಮತ್ತಿತರೆ ಅಲ್ಪಸಂಖ್ಯಾತರು ತಮಗೆ ಬೆಲೆ ಬಂದಿದ್ದಕ್ಕೆ ಮೋದಿ ಸರ್ಕಾರ ಕೋಮು ಸರ್ಕಾರವಲ್ಲ, ಅಲ್ಪಸಂಖ್ಯಾತರ ಪರ ಸರ್ಕಾರ ಎಂದು ಅಭಿgನಂದಿಸಿದರು. ಮೋದಿ ಆದೇಶದಿಂದ ಗಂಡಂದಿರ ಜೇಬಿನಿಂದ ದುಡ್ಡು ಎಗರಿಸುತ್ತಿದ್ದ ಮನೆಯಲ್ಲಿನ ಸ್ತ್ರೀಶಕ್ತಿಗಳು ಸಿಕ್ಕಿಬಿದ್ದು ಶಕ್ತಿ ಕಳೆದುಕೊಂಡರು. ಪೆಟ್ರೋಲ್ ಬಂಕ್‍ನವರಂತೂ 500 ಕ್ಕೆ ಚಿಲ್ಲರೆ ಕೊಡದೇ ಗಾಡಿ ಟ್ಯಾಂಕ್ ಭರ್ತಿ ಮಾಡಿ ತಮ್ಮಾಸೆ ಈಡೇರಿಸಿಕೊಂಡರೆ ಮುಗ್ಧ ಗಾಡಿಗಳು “ನಮ್ಮ ಮಾಲೀಕ ಕೇವಲ ತನ್ನ ಬಾಡಿಗೆ ಪ್ರತಿ ದಿನ ಎಣ್ಣೆ ಹಾಕಿಕೊಂಡು ಗಾಡಿಗೆ ಮಾತ್ರ ಅರೆಕಾಸಿನ ಪೆಟ್ರೋಲ್ ಹಾಕಿಸಿ ಕಂಜೂಸ್ ಬುದ್ದಿ ತೋರುತ್ತಿದ್ದ. ಈಗ ಮೋದಿ ದಯೆಯಿಂದ ನಮ್ಮ ಹೊಟ್ಟೆಯೂ ದಿನವೂ ತುಂಬುತ್ತಿದೆ” ಎಂದು ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿದವು. ಆರಂಭದಲ್ಲಿ ಕೆಲ ಬಾರ್‍ಗಳಲ್ಲಿ, ವೈನ್‍ಸ್ಟೋರ್‍ಗಳಲ್ಲಿ, ಸರ್ಕಾರಿ ಸ್ವಾಮ್ಯದ ಎಂ.ಎಸ್.ಐ.ಎಲ್. ಮದ್ಯ ಮಾರಾಟ ಮಳಿಗೆಗಳಲ್ಲಂತೂ 500, 1000 ರೂ.ನೋಟುಗಳನ್ನು ಪೂರ್ಣಕುಂಭದಿಂದ ಸ್ವಾಗತಿಸಲಾಯಿತು. ಕೆಲ ಬಾರ್‍ಗಳು ಕುಡುಕರಿಗೆ ಬಾರಿ ಬಾರಿ ಕೈಬೀಸಿ ಕರೆಯತೊಡಗಿದವು. ‘ಚಿತ್’ರಂಜನ್‍ದಾಸ್‍ಗಳಂತೂ ದಿನವಿಡೀ ತಮ್ಮಲ್ಲಿದ್ದ 500, 1000 ರೂ. ನೋಟುಗಳನ್ನು ಖುಷಿಯಾಗಿ ಚಲಾವಣೆ ಮಾಡುತ್ತಾ, ತಮ್ಮ ಸ್ನೇಹಿತರಾದ ‘ಗುಂಡು’ಮಣಿಗಳಿಗೆ ಭರ್ಜರಿ ಪಾರ್ಟಿ ಕೊಡತೊಡಗಿದರು. ಎಲ್ಲಿಯವರೆಗೆ ಹಳೆ ನೋಟುಗಳು ಚಲಾವಣೆಯಾಗುತ್ತದೆಯೋ ಅಲ್ಲಿವರೆಗೂ ಬಾರ್‍ಗಳಲ್ಲಿ ದಿನನಿತ್ಯ ‘ಗುಂಡು ಮೇಜಿನ ಪರಿಷತ್’ ನಡೆಸಿಯೇ ತೀರುವುದಾಗಿ ಮದ್ಯಪ್ರಿಯರು ಪಣ ತೊಟ್ಟರು. ಟೈಟಾನಿಕ್ ಹೀರೋಗಳು ನಿಷಿದ್ಧ ನೋಟುಗಳನ್ನು ಸುಲಭವಾಗಿ ಚಲಾವಣೆ ಮಾಡುತ್ತಾ ಕರ್ನಾಟಕದಲ್ಲಿದ್ದರೂ ‘ಮದ್ಯ’ ಪ್ರದೇಶದಲ್ಲೇ ಕಳೆದು ‘ಮದ್ಯ’ರಾಧನೆಯಲ್ಲೇ ಮುಳುಗಿ ಹೋದರು. ಇನ್ನು ಸುಲಭ್‍ಶೌಚಾಲಯದಲ್ಲಿ ಅನ್‍ಲೋಡ್ ಮಾಡಲು ಹೋದಾಗ “500 ಕ್ಕೆ ಚಿಲ್ರೆ ಇಲ್ಲ, ಅಷ್ಟಕ್ಕೂ ಮಾಡ್ಕೊಳ್ರೀ” ಎಂದ್ರೆ ಏನ್ ಮಾಡೋದು ಎಂದು ಕೆಲ ಬುದ್ಧಿ ಜೀವಿಗಳು ಚಿಂತಿಸತೊಡಗಿದರು. ಇನ್ನು ಮಹಾಶಯರೊಬ್ಬರು ಸುಲಭ್‍ಶೌಚಾಲಯದಲ್ಲಿ ತಮ್ಮಾಸೆ ಈಡೇರಿಸಿಕೊಂಡು 2000 ರೂ. ನೋಟಿಗೆ ಚಿಲ್ರೆ ಇಲ್ಲದ ಪ್ರಯುಕ್ತ ತಮ್ಮ `ಗೊಬ್ಬರ’ ಕ್ಕೆ 5 ರೂ.ನ ಚೆಕ್ ಬರೆದುಕೊಟ್ಟ ಬಗ್ಗೆಯೂ ವಾಟ್ಸಾಪ್‍ನಲ್ಲಿ ಸುದ್ದಿ ಹರಿದಾಡತೊಡಗಿದವು. ಊರೊಂದರಲ್ಲಿ ನಿಷಿದ್ಧಗೊಂಡ 500 ರೂ. ನೋಟನ್ನು ಕತ್ತೆಯೂ ತಿನ್ನಲಿಲ್ಲವಂತೆ ! ಹಾಗಾದ್ರೆ ಮೋದಿ ಆಡಳಿತದಲ್ಲಿ ಕೇವಲ ದಡ್ಡಪ್ರಾಣಿಯೆಂಬಂತೆ ಬಿಂಬಿತವಾಗುತ್ತಿದ್ದ ಕತ್ತೆಗೆ ಕೂಡ ಬುದ್ಧಿ ಬಂತು. ಭಿಕ್ಷುಕರೂ ಕೂಡ 500 ರೂ. ನೋಟನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿದಾಗ ನೋಟಿನಲ್ಲಿದ್ದ ಗಾಂಧಿ ಕೂಡ ಕನ್ನಡಕ ತೆಗೆದು ಕಣ್ಣೊರಿಸಿಕೊಂಡರು. ಕೋಲ್ಕೊತ್ತಾದ ಪ್ರಸಿದ್ಧ ವೇಶ್ಯಾವಾಟಿಕೆ ಪ್ರದೇಶವೊಂದರಲ್ಲಿ ಬರೀ 500, 1000 ರೂ.ಗಳು ತೂರಾಡಿದವಂತೆ. ಅನೇಕ ಚಪಲಚನ್ನಿಗರಾಯರು ಹೆಂಗಿದ್ರೂ ನೋಟಿಗೆ ಬೆಲೆ ಇಲ್ಲ, ಈ ಬೆಲೆವೆಣ್ಣುಗಳ ನೋಟಕ್ಕಾದ್ರೂ ಬೆಲೆ ಕಟ್ಟಿ 500, g21000 ರೂ.ಗಳನ್ನು ಚಿಲ್ರೆ ಕೇಳದೆ “ಕಾಯಿನ್ ಬೂತ್’ಗಳಿಗೆ ಹಾಕಿ ತಮ್ಮಾಸೆ ಈಡೇರಿಸಿಕೊಂಡರಂತೆ. ಕೇಂದ್ರದ ನಿರ್ಧಾರದಿಂದ ವೇಶ್ಯೆಯರ ‘ಕೇಂದ್ರ’ದ ಹುಂಡಿಗಳು ತುಂಬಿ ಹೋದವಂತೆ. ಧಾರಾವಾಹಿಗಳ ಕಾಟದಿಂದ ಬೇಸತ್ತ ಕೆಲ ಗಂಡಿದರು ನೋಟಿನಂತೆ 500, 1000 ಕಂತುಗಳನ್ನು ದಾಟಿ ತಮ್ಮ ಪ್ರಾಣ ಹಿಂಡುತ್ತಿರುವ ಟಿ.ವಿ. ಧಾರಾವಾಹಿಗಳನ್ನು ಕೂಡ ಮೋದಿ ಕೂಡಲೇ ನಿಷಿದ್ಧಗೊಳಿಸಬೇಕೆಂದು ಅಲವತ್ತುಕೊಂಡರೆ ; ಮನೆಯಲ್ಲೇ ಬಿದ್ದಿರೋ ಹೆಂಡಂದಿರ ಕಾಟದಿಂದ ಬೇಸತ್ತಿದ್ದ ಕೆಲವು ‘ಹೋಮಿಯೋಪತಿ’ಗಳು ನೋಟು ಬದಲಾವಣೆಯಂತೆ ತಮ್ಮ ಹೆಂಡಂದಿರ ಬದಲಾವಣೆಗೂ ಇದೇ ರೀತಿ ಮೋದಿ ಅವಕಾಶ ಕಲ್ಪಿಸಬಾರದೇಕೆಂದು ಕಣ್ಣೀರಿಟ್ಟರಂತೆ. ನೋಟುಗಳನ್ನು ಬ್ಯಾನ್ ಮಾಡಿದಂತೆ “ಫೇರ್ & ಲವ್ಲಿ”ಯನ್ನೂ ಬ್ಯಾನ್ ಮಾಡಿದ್ದರೆ ಅಸಲಿ ಮುಖ ಮರೆಮಾಚಿ ಸಮಾಜಕ್ಕೆ ಮಂಕುಬೂದಿ ಎರಚುತ್ತಿದ್ದ ಎಷ್ಟೋ ಕಪ್ಪು ಮುಖಗಳು ಹೊರಬರುತ್ತಿದ್ದವೆಂದು ಕೆಲವರು ಅಂದುಕೊಂಡರು. ಇನ್ನು ದಿನನಿತ್ಯ ತಮ್ಮಲ್ಲಿದ್ದ ನೋಟುಗಳ ವಿನಿಮಯಕ್ಕೆ ಇರೋ ಕೆಲಸ ಬಿಟ್ಟು ಬ್ಯಾಂಕಿನ ಮುಂದೆ ಕ್ಯೂ ನಿಲ್ಲೋದು ನಿತ್ಯದ ಸಾಮಾನ್ಯ ದೃಶ್ಯವಾಗಿಬಿಟ್ಟಿತ್ತು. ತಿಂಡಿ ಡಬ್ಬಿ, ಊಟದ ಡಬ್ಬಿ, ಕೆಲ ನೋವು ನಿವಾರಕ ಮಾತ್ರೆಗಳು, ಶುಗರ್, ಬಿ.ಪಿ. ಮಾತ್ರೆ, ಇನ್ಸುಲಿನ್, ಕಾಲು ನೋವಿಗೆ ಅಯೋಡಿಕ್ಸ್ ಸ್ಪ್ರೇ, ಅಕ್ಕಪಕ್ಕದವರ ಬೈಗುಳಗಳ ರಕ್ಷಣೆಗೆ ಕಿವಿಗೆ ಹತ್ತಿ, ಕ್ಯೂನಲ್ಲಿ ನಿಂತ (ಹಲ್ಲುಜ್ಜದೇ, ಹಬ್ಬಗಳಲ್ಲಿ ಮಾತ್ರ ಸ್ನಾನ ಮಾಡೋ ಮಂದಿ)ವರÀ ರಕ್ಷಣೆಗೆ ಡಿಯೋಡರೆಂಟ್, ಸೆಂಟು, ಪೆನ್ನು, ಸ್ಟೆಪ್ಲರ್, ಪವರ್ ಬ್ಯಾಂಕ್, ಕರೆನ್ಸಿ ಕಾರ್ಡ್, ಎಲೆ ಅಡಿಕೆ ಉಗಿಯಲು ಕೈಯಲ್ಲೊಂದು ಪೀಕುದಾನಿ ಹೀಗೆ ಹತ್ತು ಹಲವು ಪರಿಕರಗಳೊಂದಿಗೆ ಪರೀಕ್ಷೆಗೆ ಸಿದ್ಧರಾದಂತೆ ಜನ ಬ್ಯಾಂಕ್ ಮುಂದೆ ಕ್ಯೂ ನಿಲ್ಲತೊಡಗಿದರು. ಜನರಿಲ್ಲದೆ ಸ್ಮಶಾನಮೌನ ತುಂಬಿ ಖಾಲಿ ಹೊಡೆಯುತ್ತಿದ್ದ ಅಂಚೆ ಕಛೇರಿಗಳು ದಿಢೀರನೇ ತುಂಬಿ ತುಳುಕಿ ಹಬ್ಬದ ವಾತಾವರಣ ಅನುಭವಿಸಿದವು. ಅಂತೂ ಪ್ರತಿಯೊಬ್ಬರೂ ಒಂದಲ್ಲಾ ಒಂದು ದಿನ ತಮ್ಮ ಕಾಲ ಮೇಲೆ ನಿಲ್ಲಲು ಅವಕಾಶ ಮಾಡಿಕೊಟ್ಟರೆಂದು ಮೋದಿ ಪಕ್ಷದವರು ಮೋದಿಯನ್ನು ಸಮರ್ಥಿಸಿಕೊಂಡರು. ಬೆಳಿಗ್ಗೆಯಿಂದ ಸಂಜೆವರೆಗೆ ಕ್ಯೂ ನಿಂತು ಕೆಲವರು ಕಾಲು ನೋಯಿಸಿಕೊಂಡರೆ, ಪೈಲ್ಸ್‍ನಿಂದ ನರಳುತ್ತಿರುವವರು ಬೆಳಿಗ್ಗೆಯಿಂದ ಸಂಜೆವರೆಗೆ ಏನೂ ಆಗಿಲ್ಲವೆಂಬಂತೆ ಆರಾಮಾಗಿ ಕ್ಯೂನಲ್ಲಿ ನಿಂತು ಸಂಭ್ರಮಿಸಿದರು. ಊರೊಂದರಲ್ಲಿ ಬ್ಯಾಂಕ್ ಮುಂದೆ ಬೆಳಿಗ್ಗೆಯಿಂದ ಸಂಜೆವರೆಗೆ ಕ್ಯೂನಲ್ಲೇ ನಿಂತ ಹುಡುಗ, ಹುಡುಗಿಗೆ ಕಣ್ಣೋಟದಲ್ಲೇ ಲವ್ ಶುರುವಾದ ಬಗ್ಗೆಯೂ ವರದಿಯಾಯ್ತು. ಇದೊಂದು ಬಗೆಯ ‘ಕ್ಯೂ’ಟ್ ಲವ್‍ಸ್ಟೋರಿ. ಮುಂದೆ ಹುಡುಗ ಹುಡುಗಿಗೆ ಕೈಕೊಟ್ಟು ಎಸ್ಕೇಪ್ ಆದ್ರೆ ಹುಡುಗಿ ಕಡೆಯವರು ಹುಡುಗನ ಮನೆ ಮುಂದೆ ಕ್ಯೂ ನಿಲ್ದೇ ಇದ್ರೆ ಅಷ್ಟೇ ಸಾಕು ಅಂತ ಕೆಲವರು ಕಳವಳ ವ್ಯಕ್ತಪಡಿಸಿದರು. ಚಿಲ್ರೆ ಸಮಸ್ಯೆಯಿಂದ ಕೆಲ ದಿನಗಳಮಟ್ಟಿಗೆ ಹೆದ್ದಾರಿ ಚೆಕ್‍ಡ್ಯಾಂಗಳಾಗಿದ್ದ ಟೋಲ್‍ಗಳು ಸರ್ಕಾರದ ಆದೇಶದಂತೆ ‘ಟೋಲ್ ಫ್ರೀ’ ಯಾದವು. ಎಲ್ಲಾ ಗಾಡಿಗಳಿಗೂ ಹೆದ್ದಾರೀಲಿ ಸ್ವಾತಂತ್ರ್ಯ ಸಿಕ್ಕ ಅನುಭವದಂತೆ ಮುನ್ನುಗ್ಗಿದವು. ಏಕಾಏಕಿ ಸಂತೆಯಂತೆ ಬ್ಯಾಂಕಿಗೆ ಜನ ನುಗ್ಗಿದ್ದರಿಂದ ನಗದು ವ್ಯವಹಾರಗಳ ಕೇಂದ್ರಗಳಾದ ಬ್ಯಾಂಕ್‍ಗಳಲ್ಲಿನ ಸಿಬ್ಬಂದಿ ನಗದೇ ಸಿಟ್ಟಿನಿಂದಲೇ ಕಾರ್ಯನಿರ್ವಹಿಸಿದರು. ಪದೇ ಪದೇ ಒಂದೇ ಹೆಸರಿನವರು ನೋಟು ವಿನಿಮಯ ಮಾಡಿಕೊಳ್ಳುತ್ತಿದ್ದನ್ನು ಕಂಡು ರೋಸಿ ಹೋದ ಬ್ಯಾಂಕ್ ಸಿಬ್ಬಂದಿ ಕೊನೆಗೆ ಅವರ ಬೆರಳಿಗೆ ಶಾಹಿ ಹಾಕುವ ನಿರ್ಧಾರ ಕೈಗೊಂಡರು. ತಿಂಗಳಂತ್ಯಕ್ಕೆ 20 ಬೆರಳುಗಳಿಗೂ ಶಾಹಿ ಹಾಕಿಸಿಕೊಂಡ ಮೇಲೆ ಬ್ಯಾಂಕ್ ಸಿಬ್ಬಂದಿ ಇನ್ಯಾವ ಭಾಗಕ್ಕೆ ಶಾಹಿ ಹಾಕುತ್ತಾರೆಂಬುದು ಹಲವರು ಯೋಚಿಸಿ ನಾಚಿ ನೀರಾದರು. ಶಾಹಿ ಅಳಿಸಿಹೋಗುತ್ತೆ, ಶಾಹಿ ಬದಲು ಬರೆ ಎಳೆಯಿರಿ ಎಂದು ದುಡ್ಡು ಸಿಗದೇ ನಿರಾಶೆ ಹೊಂದಿದವರು ಬ್ಯಾಂಕಿಗೆ ಭಯಂಕರ ಐಡಿಯಾ ಕೊಟ್ಟರು. ತಮ್ಮ ಹಳೆ ನೋಟು ವಿನಿಮಯವಾಗದೇ ಇದ್ದಾಗ ಕೆಲವರು ನೊಂದು ತಮ್ಮ ಹಳೆ ಜೀವನಕ್ಕೆ ಗುಡ್‍ಬೈ ಹೇಳಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆಯೂ ವರದಿಯಾದವು. ವಾರವಿಡೀ ರಜವಿಲ್ಲದೆ ನೋಟುಗಳನ್ನು ಎಣಿಸಿ ಕೆಲಸ ಮಾಡಿದ ಕೆಲ ಬ್ಯಾಂಕ್ ಸಿಬ್ಬಂದಿ ಮನೆಗೆ ಬಂದಾಗ ರಾತ್ರಿಯಿಡೀ ಎರಡೂ ಕೈಗಳು ನೋಟು ಎಣಿಸುವಂತೆ ಆಡುತ್ತಲೇ ಇದ್ದವಂತೆ ! ಇದರಿಂದÀ ಮನೆಯಾಕೆ ನೊಂದು ಅವರನ್ನು ಮನೆಯಾಚೆ ಮಲಗಿಸಿದರಂತೆ ಎಂಬ ಮಾತುಗಳೂ ಕಿವಿಗೆ ಬಿದ್ದವು. ಕ್ಯೂನಲ್ಲಿ ನಿಂತು ಹೊಸ 2000 ರೂ. ನೋಟು ಪಡೆದ ಕೆಲವರು ತಾವು ಯುದ್ಧ ಗೆದ್ದಿದ್ದೇವೆಂಬಂತೆ ಕುಣಿದು ಕುಪ್ಪಳಿಸಿದರು. ಕ್ಯೂನಲ್ಲೇ ಕೆಲವರು ಸಾವನ್ನಪ್ಪಿ ತಮ್ಮ ಹಳೆಯ ನೋಟುಗಳೊಂದಿಗೇ ನೇರವಾಗಿ ಶಿವನ ಪಾದಕ್ಕೆ ‘UPLOAD’ ಮಾಡಿಕೊಂಡರೆ, ‘ಐಔಂಆ’ ಆದ ಗರ್ಭಿಣಿಯೊಬ್ಬರು ಕ್ಯೂನಲ್ಲೇ ಮಗುವನ್ನು ಹೆತ್ತ ಬಗ್ಗೆಯೂ ವರದಿಯಾಯಿತು. ಎಲ್ಲರೂ ಬ್ಯಾಂಕ್ ಮುಂದೆಯೇ ಸಿಗುವಂತಾದ್ದರಿಂದ ಪೋಸ್ಟ್‍ಮ್ಯಾನ್ ಮತ್ತು ಕೊರಿಯರ್‍ನೋರಿಗೆ ಬೀದಿ ಬೀದಿ ಅಲೆದು ಅಡ್ರೆಸ್ ಹುಡುಕೋದು ತಪ್ಪಿ ಅವರು ಕುಣಿದು ಕುಪ್ಪಳಿಸಿದರು. ಮದುವೆ ಮಾಡೋ ಮಂದಿಗೆ 2,50,000/- ರೂ.ಗಳನ್ನು ಮಾತ್ರ ವಿತ್‍ಡ್ರಾಗೆ ನಿರ್ಬಂಧ ಹೇರಿದಾಗ ಮದುವೆ ವರ ‘WORRY’ ಮಾಡಿಕೊಳ್ಳುವಂತಾಯಿತು. ತಾಳಿ ಕಟ್ಟಲೂ ಸ್ವಲ್ಪ ಸಮಯ ತಾಳುವುದೇ ಮೇಲೆಂದು ಕೆಲವರು ಸಮಾಧಾನ ಮಾಡಿಕೊಂಡರೆ, ಊರೊಂದರಲ್ಲಿ ಜಿಪುಣಾಗ್ರೇಸರೊಬ್ಬರು ಸರಳ ಮದುವೆಯೆಂಬ ನೆಪದಲ್ಲೇ ಸಿಕ್ಕಿದ್ದೇ ಅವಕಾಶವೆಂದು ಕೇವಲ 500 ರೂ. ನಲ್ಲೇ ಮದುವೆಗೆ ಬಂದ ಮಂದಿಗೆ ಕೆ.ಟಿ. (ಕಚಡಾ ಟೀ) ಕುಡಿಸಿ ಮದುವೆ ಮಾಡಿಕೊಂಡು ಹಿಗ್ಗಿ ಹೀರೇಕಾಯಿ ಆದ ಬಗ್ಗೆಯೂ ವರದಿಯಾಯಿತು. ಇಲ್ಲಿಯವರೆಗೆ ಲಗ್ನಪತ್ರಿಕೆಗಳನ್ನು ಮೊದಲು ದೇವರ ಮನೇಲಿಟ್ಟು ಪೂಜಿಸಲಾಗುತ್ತಿದ್ದರೆ, ಈಗ ಆ ಲಗ್ನಪತ್ರಿಕೆಯನ್ನು ಬ್ಯಾಂಕ್ ಮ್ಯಾನೇಜರ್ ಮುಂದಿಟ್ಟು ತಮ್ಮ ದುಡ್ಡಿಗೆ ಬೇಡಿಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಯಿತು. ಸೂಟು-ಬೂಟು ಹಾಕಿಕೊಂಡ ಬ್ಯಾಂಕ್ ಮ್ಯಾನೇಜರ್ ಹೊಸ ದೇವರಂತೆ ಕಾಣತೊಡಗಿದರು. ಕೆಲ ಬುದ್ಧಿವಂತರು ಹೊಸನೋಟನ್ನು ಸ್ಕ್ಯಾನ್ ಮಾಡಿ ಮೀನು ಮಾರೋರಿಗೆ ಕೊಟ್ಟು ಅವರಿಂದ ಮೀನನ್ನು, ಚಿಲ್ರೆಯನ್ನು ಯಾಮಾರಿಸಿ ತೆಗೆದುಕೊಂಡು ಹೋದ ಬಗ್ಗೆಯೂ ವರದಿಯಾಯ್ತು. ಮೊದಲೇ ಒದ್ದೆ ಕೈನ ಮೀನು ಮಾರೋ ಮಂದಿಗೆ ಕಲರ್‍ಪ್ರಿಂಟ್‍ನ ನಕಲು ನೋಟು ಕೊಟ್ಟಿದ್ದಾರೆ. ಕೆಲವೇ ಸಮಯದಲ್ಲಿ ನಕಲಿ ನೋಟು ತನ್ನ ಬಣ್ಣ ಕಳಚಿಕೊಂಡು ಅದರ ನಿಜ ಬಣ್ಣ ತೋರಿಸಿತಂತೆ. ಯಾವಾಗ ನೋಟಿನ ಎಲ್ಲಾ ಬಣ್ಣ ಖಾಲಿಯಾಗಿ ಕೇವಲ ಬಿಳಿಹಾಳೆಯಂತಾಯಿತೋ ಇದೇ ನಿಜವಾದ ‘ವೈಟ್’ ಮನಿಯಿರಬೇಕೆಂದು ಸಮಾಧಾನಪಟ್ಟುಕೊಂಡರೂ ಆಮೇಲೆ ಅವರಿಗೆ ಗೊತ್ತಾಯ್ತಂತೆ ನಾವೇ ಬಲೆ ಹಾಕೋರು, ನಮಗೇ ಯಾಮಾರಿಸಿ ಬಲೆ ಹಾಕಿದ್ದಾರೆ ಅಂತ. ಮೀನು ಹಿಡಿದ್ರೂ ಹಿಡೀಬಹುದು, ಈ ಟೋಪಿ ಹಾಕಿದೋರ್ನ ಹಿಡಿಯೋದು ಕಷ್ಟ ಎಂದು ಅವರಿಗೆ ಸಂಸ್ಕøತ ಪದ ಬಳಸಿ ಬೈದುಕೊಂಡು ಸಮಾಧಾನ ಮಾಡಿಕೊಂಡರಂತೆ. ಕೆಲವರ ಮೊಬೈಲ್‍ಗಳಲ್ಲಿ (ತಮಾಷೆಗಾಗಿ ಮಾಡಿದ ಆಪ್‍ನಿಂದ ಬಕ್ರಾ ಆದ ಮಂದಿ) ಯಾವಾಗ 2000 ರೂ. ನೋಟಿನ ಮೇಲೆ ಸ್ಕ್ಯಾನ್ ಮಾಡಿದಾಗ ಮೋದಿ ಭಾಷಣದ ವೀಡಿಯೋ ಕಾಣಲಿಕ್ಕೆ ಶುರುವಾಯ್ತೋ ಜನ ನಡುಗಿಬಿಟ್ಟರು. ಕಲಿಯುಗದಲ್ಲಿ ನೋಟುಗಳೂ ಮಾತನಾಡಲಿಕ್ಕೆ ಶುರುಮಾಡಿದವಲ್ಲಾ ಎಂದುಕೊಳ್ಳತೊಡಗಿದರು. 2000 ದ ನೋಟು ಎಲ್ಲೇ ಇಟ್ಕೊಂಡ್ರೂ ಅದು ಮೋದಿಗೆ ಕಾಣ್ಸುತ್ತಂತೆ ಎಂದು ಎಲ್ಲರ ಬಾಯಲ್ಲಿ ಗುಸುಗುಸು ಶುರುವಾಯ್ತು. ಯಾವಳನ್ನೂ ಬೇಕಾದ್ರೂ ಇಟ್ಕೊಂಡ್ರೂ 2000 ನೋಟನ್ನು ಮಾತ್ರ ತಾವು ಇಟ್ಕೋಬಾರ್ದು ಎಂದು ಕೆಲವು ಗಂಡಸರು ಧೈರ್ಯ ತಂg8ದುಕೊಂಡರು. ಗಂಡಸರು ಕೆಳಗೆ, ಕನ್ಯಾರತ್ನಗಳು ಮೇಲೆ ತಮ್ಮ ಗುಪ್ತ ಜಾಗಗಳಲ್ಲಿ 2000 ನೋಟನ್ನು ಇಡಲು ಹೆದರುವಂತಾದರು. ಮೋದಿಗ್ಯಾಕೆ ನಮ್ಮ ಗುಪ್ತಜಾಗಗಳನ್ನು ನೋಡೋ ಬುದ್ಧಿ ಬಂತು ? ಪೋಲಿ ಪ್ರಧಾನಿ ಎಂದು ಕೆಲವರು ಬಡಬಡಿಸತೊಡಗಿದರು. ಯಾರದ್ದೋ ಸುಳ್ಳಿಗೆ ಪ್ರಥಮ ಬಾರಿಗೆ ಸ್ತ್ರೀಶಕ್ತಿಗಳ ಅಪೂರ್ವ ಜಾಗದಲ್ಲಿ ನಮಗೆ ಜಾಗವಿಲ್ಲದಂತಾಯಿತೆಂದು 2000 ನೋಟುಗಳೂ ನೊಂದುಕೊಂಡವು. ಎ.ಟಿಎಂ. ಗಳು ಮೇರೆ ಮೇರಿ ಕಾರ್ಯವೆಸಗಿ ಸೊರಗಿ ಹೋದವು. ಎಷ್ಟೋ ಎ.ಟಿ.ಎಂ. ಗಳಲ್ಲಿ ದೇವರ ದರ್ಶನಕ್ಕೆ ಸಮಯ ನಿಗಧಿಪಡಿಸಿದಂತೆ ಸಮಯ ನಿಗಧಿಪಡಿಸಲಾಯಿತು. ಎನಿ ಟೈಮ್ ಮನಿ ಎಂಬ ವ್ಯಾಖ್ಯಾನವನ್ನು ಎನಿ ಟೈಮ್ ಮುಚ್ಚಿರುತ್ತೆ ಎಂದು ಕೆಲವು ಎ.ಟಿ.ಎಂ.ಗಳು ತಮಗೆ ತಾವೇ ಘೋಷಿಸಿಕೊಂಡು ಬಾಗಿಲು ಮುಚ್ಚಿಕೊಂಡೇ ಇದ್ದುಬಿಟ್ಟವು. ಯಾವಾಗ ಎ.ಟಿ.ಎಂ. ನಲ್ಲಿ ಕೇವಲ 2 ಸಾವಿರ ಮುಖಬೆಲೆಯ ನೋಟು ಮಾತ್ರ ಬರಲಿಕ್ಕೆ ಶುರುವಾಯಿತೋ ಜನರಿಗೆ ಚಿಲ್ರೆ ಸಿಗೋದೇ ಒಂದು ದೊಡ್ಡ ಸಮಸ್ಯೆಯುಂಟಾಯಿತು. ಬೀದಿ ಬೀದಿಲಿ 2000 ನೋಟಿಗೆ ಚಿಲ್ರೆ ಹುಡುಕೋದೇ ಜನರ ಮುಖ್ಯ ಕೆಲಸವಾಗಿಬಿಟ್ಟಿತು. ಕೆಲ ಪೋಲಿಸರೂ ಕೂಡ ಕಳ್ಳರನ್ನು ಹುಡುಕುವ ಬದಲು 2000 ನೋಟಿಗೆ ಚಿಲ್ರೆ ಹುಡುಕುವ ಕಾಯಕ ಕೈಗೊಂಡರು. “ನಿಮ್ಮ ಯಜಮಾನ್ರು ಎಲ್ರೀ ?” ಅಂದ್ರೆ “ ಅವರು 3 ದಿನ ಆಯ್ತು 2000 ನೋಟಿಗೆ ಚಿಲ್ರೆ ತರೋಕೆ ಹೋಗಿದಾರೆ, ಇನ್ನೂ ಬಂದಿಲ್ಲ” ಎಂದು ಕೆಲವರು ಉತ್ತರಿಸುವಂತಾಯಿತು. ಅಲ್ಲದೆ ಊರೊಂದರಲ್ಲಿ ಅಪರಿಚಿತರು ಹಳೆ ನೋಟು ಕೊಡಿ, ಹೊಸ ನೋಟು ಕೊಡುತ್ತೇವೆಂದು ಸ್ವಾಮೀಜಿಯೊಬ್ಬರಿಂದ 1 ಕೋಟಿ ತಗೊಂಡು ಬಾಯಿಗೆ ತಿರುನಲ್ವೇಲಿ ಹಲ್ವ ತಿನ್ನಿಸಿ ಪರಾರಿಯಾದ ಘಟನೆಯೂ ವರದಿಯಾಯಿತು. ಕೋಟಿನಾಮ ಇಕ್ಕಿಸಿಕೊಂಡ ಸ್ವಾಮೀಜಿ ತನ್ನ ಭಕ್ತರ ಮುಂದೆ “ಕಳ್ಕೊಂಡೆ, ಕಳ್ಕೊಂಡೆ, ಎಲ್ಲಾ ಕಳ್ಕೊಂಡೆ…” ಎಂದು ಶರಪಂಜರ ಡೈಲಾಗ್ ಹೊಡೆದರೂ ಏನೂ ಪ್ರಯೋಜನವಾಗಲಿಲ್ಲ. ಕೆಲ ಹಿರಿ ತಲೆಗಳು ಮೋದಿ ಎಂದಾಕ್ಷಣ ಯಾವ ಪರಿ ಹೆದರಿಬಿಟ್ಟರೆಂದರೆ ಅವರು ತಮ್ಮ ಬಿಳಿ ಕೂದಲನ್ನೂ ಕಪ್ಪಾಗಿಸಿಕೊಳ್ಳಲು ಯೋಚಿಸುವಂತಾಯಿತು. ಅಂತೂ ಇಷ್ಟು ವರ್ಷಕ್ಕಾದರೂ ಕೊನೆಗೂ ಇಂಡಿಯಾ `ಚೇಂಜ್’ ಆಯ್ತಲ್ಲ ಬಿಡಿ.
paper-photo-1– ಎಲ್.ವಿ. ಕುಮಾರಸ್ವಾಮಿ, ಹಿರಿಯೂರು.

Leave a Comment