ಕೋಟೆ ನಗರದ ಅಭಿವೃದ್ದಿಗೆ ತೊಂಬತ್ತು ದಿನಗಳಲ್ಲಿ ಚಾಲನೆ

h-anjinaiahಕೋಟೆ ನಗರದ ಒಳಚರಂಡಿ ಕಾಮಗಾರಿ ನಡೆಯುತ್ತಿರುವುದರಿಂದ ಹಲವಾರು ಕಡೆ ರಸ್ತೆಗಳು ಹಾಳಾಗಿದ್ದು ಇವುಗಳ ನಿರ್ಮಾಣಕ್ಕೆ ನಗರೋತ್ಥಾನ ಸೇರಿದಂತೆ ವಿಶೇಷ ಘಟಕ, ಗಿರಿಜನ ಉಪಯೋಜನೆ ಹಾಗೂ ರಾಜ್ಯ ಹಣಕಾಸು ಯೋಜನೆ ಅನುದಾನದಡಿ ಸಮಗ್ರ ಅಭಿವೃದ್ದಿಗೆ ಮುಂದಿನ ಮೂರು ತಿಂಗಳಲ್ಲಿ ಚಾಲನೆ ದೊರೆಯಲಿದೆ ಎಂದು ಉಸ್ತುವಾರಿ ಎಚ್. ಆಂಜನೇಯ ತಿಳಿಸಿದರು.
ಗುರುವಾರ ನಗರದ ಜೋಗಿಮಟ್ಟಿ ರಸ್ತೆ, ಸ್ವಾಮಿವಿವೇಕಾನಂದ ನಗರ, ಸುಣ್ಣದಗುಮ್ಮಿ, ದೊಡ್ಡಪೇಟೆ, ಚಿಕ್ಕಪೇಟೆ, ಧರ್ಮಶಾಲಾ ರಸ್ತೆ, ಲಕ್ಷ್ಮೀಬಜಾರ್, ನೆಹರು ನಗರ, ಅಗಸನಕಲ್ಲು, ಹಳೆ ಮಂಡಕ್ಕಿ ಭಟ್ಟಿ, ಅಗಸನಕಲ್ಲು ಎ.ಕೆ.ಕಾಲೋನಿ ವೀಕ್ಷಣೆ ಕೈಗೊಂಡು ಸಾರ್ವಜನಕರಿಂದ ಅಹವಾಲು ಸ್ವೀಕರಿಸಿ ರಸ್ತೆ, ಚರಂಡಿ ಸ್ಥಿತಿಗತಿ ವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಚಿತ್ರದುರ್ಗ ನಗರದಲ್ಲಿ ನಗರೋತ್ಥಾನದ ಎರಡನೇ ಹಂತದಲ್ಲಿ 35 ಕೋಟಿ ಬಿಡುಗಡೆಯಾಗಿದೆ ಮತ್ತು ಮೊದಲ ಹಂತದಲ್ಲಿ ಉಳಿದ 15 ಕೋಟಿ ಹಾಗೂ ವಿಶೇಷ ಘಟಕ ಮತ್ತು ಗಿರಿಜನ ಉಪ ಯೋಜನೆಯಡಿ 5 ಕೋಟಿ ಅನುದಾನ ಲಭ್ಯವಾಗಿದ್ದು ಬರುವ ಜನವರಿಯಲ್ಲಿ ನಗರೋತ್ಥಾನ ಸಮಿತಿ ಸಭೆಯನ್ನು ಕರೆದು ಕಾಮಗಾರಿಗಳಿಗೆ ಕ್ರಿಯಾ ಯೋಜನೆಯನ್ನು ರೂಪಿಸಿ ಸರ್ಕಾರದಿಂದ ಅನುಮೋದನೆ ಪಡೆದು ಸ್ಥಳೀಯವಾಗಿ ಗುತ್ತಿಗೆಯನ್ನು ನೀಡುವ ಮೂಲಕ ಮುಂದಿನ ಮೂರು ತಿಂಗಳಲ್ಲಿ ಎಲ್ಲಾ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತದೆ ಎಂದರು.
ನಗರದಲ್ಲಿ ಒಳಚರಂಡಿ ಕಾಮಗಾರಿಯಿಂದ ಹಿಂದೆ ಇದ್ದ ರಸ್ತೆಗಳಲ್ಲಿ ಯು.ಜಿ.ಡಿ.ಪೈಪ್‍ಲೈನ್ ತೆಗೆಯಲಾಗಿದ್ದರಿಂದ ನಗರದ ರಸ್ತೆಗಳು ಬಹುತೇಕ ಗುಂಡಿಬಿದ್ದಿವೆ. ಇವೆಲ್ಲಾ ರಸ್ತೆಗಳನ್ನು ಅಭಿವೃದ್ದಿಪಡಿಸಲು ಸಮಗ್ರ ಅಭಿವೃದ್ದಿ ಯೋಜನೆಯು ಸಿದ್ದಪಡಿಸಲಾಗಿದೆ. ಮತ್ತು ನಗರದ ಕೆಲವು ಪ್ರದೇಶಗಳು ಕೊಳಚೆಪ್ರದೇಶಗಳಾಗಿದ್ದರೂ ಇವುಗಳ ಘೋಷಣೆಯಾಗಿಲ್ಲ, ಈ ಬಗ್ಗೆ ಪೌರಾಡಳಿತ ಸಚಿವರ ಗಮನಕ್ಕೆ ತಂದು ಅಭಿವೃದ್ದಿಗೆ ಬರಬೇಕಾದ ಅನುದಾನವನ್ನು ಪಡೆದು ಈ ಪ್ರದೇಶಗಳ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರ ಸಕ್ರಮ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದರು.
ನಗರದಲ್ಲಿ ರಾಜಕಾಲುವೆ ಒತ್ತುವರಿ, ರಸ್ತೆ, ಚರಂಡಿಗಳ ಒತ್ತುವರಿಯಾಗಿದೆ. ಇವುಗಳ ತೆರವಿಗೆ ಸೂಚಿಸಲಾಗಿದೆ. ಮುಖ್ಯ ರಸ್ತೆಯಲ್ಲಿ ಗಾಂಧಿ ವೃತ್ತದ ಸಮೀಪ ರಸ್ತೆಯ ಅಗಲೀಕರಣವಾಗಿರುವುದಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಲು ನಗರಸಭೆ ಆಯುಕ್ತರಿಗೆ ಸೂಚಿಸಲಾಗಿದೆ. ಮತ್ತು ಜೋಗಿಮಟ್ಟಿ ರಸ್ತೆಯಿಂದ ಕೋಟೆಯ ಮುಂಭಾಗಕ್ಕೆ ನೇರವಾದ ರಸ್ತೆ ಇದ್ದು ಇದರ ಒತ್ತುವರಿಯನ್ನು ತೆರವು ಮಾಡಿ ರಸ್ತೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಯಾರು ಒತ್ತುವರಿ ಮಾಡಿ ಕಟ್ಟಿಕೊಂಡಿದ್ದಾರೆ, ಅಂತಹವರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದ ಅವರು ನಗರದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ನಗರೋತ್ಥಾನದಡಿ ಹಿಂದಿನಂತೆ ಪ್ಯಾಕೇಜ್ ಕಾಮಗಾರಿ ಬದಲಾಗಿ ಪ್ರತ್ಯೇಕ ಟೆಂಡರ್ ಕರೆಯಲಾಗುತ್ತದೆ. ಇದರಿಂದ ಸ್ಥಳೀಯರು ಟೆಂಡರ್‍ನಲ್ಲಿ ಭಾಗವಹಿಸುವ ಅವಕಾಶ ಲಭಿಸುತ್ತದೆ. ಮತ್ತು ಇದರಿಂದ ಕಾಮಗಾರಿ ವೇಗವು ಹೆಚ್ಚುತ್ತದೆ ಎಂದರು.
ಸಚಿವರೊಂದಿಗೆ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಪಾಲ್ಗೊಂಡು ಜನರ ಅಹವಾಲು ಸ್ವೀಕರಿಸಿದರು. ಸಂಸದ ಬಿ.ಎನ್.ಚಂದ್ರಪ್ಪ, ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ನಗರಸಭೆ ಅಧ್ಯಕ್ಷ ಮಂಜುನಾಥ್ ಗೊಪ್ಪೆ, ಉಪಾಧ್ಯಕ್ಷ ಮಲ್ಲೇಶಪ್ಪ, ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ, ಪೌರಾಯುಕ್ತ ಚಂದ್ರಪ್ಪ ಹಾಗೂ ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Comment