ಎಕೆ-47 ರೋಚಕ ಇತಿಹಾಸ

    akಎಕೆ-47, ಕೇವಲ ಎರಡಕ್ಷರ… ಅಷ್ಟೇ ಫಿನಿಷ್ !  ಎಂತಹವರಿಗೂ ಎದೆ ಝಲ್ ಎನಿಸುವ ಶಬ್ದವಿದು.  ಆಧುನಿಕ ಜಗತ್ತಿನ ಯುದ್ಧದ ಚಿತ್ರಣವನ್ನೇ ಶಾಶ್ವತವಾಗಿ ಬದಲಿಸಿದ ಭಯಂಕರ ಶಸ್ತ್ರ.  ಭಯೋತ್ಪಾದಕರ, ವಿಧ್ವಂಸಕರ ನೆಚ್ಚಿನ ಶಸ್ತ್ರವಾದ ಇದು ಜಗತ್ತಿನ ಭೀಕರ ಶಸ್ತ್ರಗಳಲ್ಲೇ ಮೊದಲ ಸ್ಥಾನ ಪಡೆದಿದೆ.  ಒಂದು ನಿಮಿಷದಲ್ಲಿ 600 ಸುತ್ತು ಗುಂಡಿನ ಮಳೆ ಸುರಿಸಬಲ್ಲ ಹಾಗೂ ಎದುರಿಗಿರುವ ನೂರಾರು ಜನರನ್ನು ಕ್ಷಣಾರ್ಧದದಲ್ಲಿ  ನೆಲಕ್ಕುರುಳಿಸುವ ಪ್ರಚಂಡ ಆಯುಧವಿದು.
ರುವಾಂಡದಂತಹ ದೇಶದಲ್ಲಿ ತುತ್ತು ಅನ್ನ ಸಿಗಲಿಕ್ಕಿಲ್ಲ, ಕಾಮರೋಸ್‍ನಲ್ಲಿ ಕುಡಿಯಲು  ಶುದ್ಧ ನೀರು ಸಿಗಲಿಕ್ಕಿಲ್ಲ,  ಅಜರಬೈಜಾನ್, ಅರ್ಮೇನಿಯಾಗಳಲ್ಲಿ ಗಟ್ಟಿ ಹಾಲು, ಫ್ಯಾನು, ಫ್ರಿಡ್ಜು ಸಿಗಲಿಕ್ಕಿಲ್ಲ  ಆದರೆ ಅಲ್ಲಿ  ಎಕೆ-47 ಬಂದೂಕು ಸಿಗುತ್ತದೆ.  ಸೂಡಾನ್, ಸೊಮಾಲಿಯಾದಂತಹ ರಾಷ್ಟ್ರಗಳಲ್ಲಿ ಮೈ ಮೇಲೆ ತೊಡಲು ಬಟ್ಟೆ ಇಲ್ಲ.  ಆದರೆ ಅವರ ಮೈ ಮೇಲೆ ಎಕೆ-47 ಬಂದೂಕು ಕಾಣಸಿಗುತ್ತದೆ.  ಲಾವೋಸ್, ಲೇಸೊಥೋ ಮುಂತಾದ ದೇಶಗಳು ತಮ್ಮ ರಾಷ್ಟ್ರಧ್ವಜದಲ್ಲಿ ಈ ಬಂದೂಕನ್ನು ಲಾಂಛನವಾಗಿ ಬಳಸಿವೆ.  ಮಾಸ್ಕೋದ ಲೆನಿನ್‍ಗಾರ್ಡ್ ಮುಖ್ಯ ರಸ್ತೆಯಲ್ಲಿ ಎಕೆ-47  ಬಂದೂಕಿನ ನೂರಾರು ಅಡಿ ಎತ್ತರದ ಪ್ರತಿಮೆಗಳು ಕಾಣಸಿಗುತ್ತವೆ.  ಅಟ್ಲಾಂಟಿಕಾದ ಯುದ್ಧಭೂಮಿ ಇರಲಿ, ಪಾಕಿಸ್ತಾನ, ಇರಾಕ್ ಗೆರಿಲ್ಲಾ ಪಡೆಗಳು ಹೋರಾಡುವಲ್ಲಿ, ಕಾಶ್ಮೀರದ ಭಯೋತ್ಪಾದಕರಾಗಲಿ, ತಮಿಳು ಹುಲಿಗಳು, ಕೊರಿಯಾದ ರಕ್ಷಣಾ ಪಡೆಗಳಿರಲಿ, ರುವಾಂಡದ ದಂಗೆಕೋರರಿರಲಿ, ಅಸ್ಸಾಂ, ನಾಗಾಲ್ಯಾಂಡಿನ ಉಗ್ರಗಾಮಿಗಳಾಗಲೀ, ಚಚೆನ್ಯದ ಬಂಡುಕೋರರಾಗಲೀ, ಆಂಧ್ರ – ಕರ್ನಾಟಕದ ನಕ್ಸಲರಾಗಲೀ ಹೀಗೆ ಪ್ರಪಂಚದ ಯಾವುದೇ ಸ್ಥಳಗಲ್ಲಿ, ಸಂದರ್ಭ ಏನೇ ಇರಲಿ, ಜಗತ್ತಿನ ಮೂಲೆ ಮೂಲೆಗೂ ಎಕೆ-47 ಬಂದೂಕು ಬೇಕೇ ಬೇಕು.
ಎಕೆ-47 ಇತಿಹಾಸ
ಕೇವಲ 58 ವರ್ಷಗಳ ಹಿಂದೆಯಷ್ಟೇ ಈ ಶಸ್ತ್ರ ರೂಪುಗೊಂಡಿತು.  ಇಂತಹ ಮಾರಣಾಂತಿಕ ಆಯುಧವನ್ನು 1947 ರಲ್ಲಿ ಕಂಡುಹಿಡಿದು ಜಗತ್ತಿಗೆ ಪರಿಚಯಿಸಿದವನೇ ರಷ್ಯಾದ ಮಿಖಾಯಿಲ್ ಕಲಷ್ನಿಕೋವ್.
ಮಿಖಾಯಿಲ್ ಕಲಷ್ನಿಕೋವ್ ರಷ್ಯಾದ ಸೈಬೀರಿಯಾದಲ್ಲಿ 1919 ರಲ್ಲಿ ಬಡ ರೈತ ಕುಟುಂಬದಲ್ಲಿ ಜನಿಸಿದ.  ತಂದೆಯ 17 ಮಕ್ಕಳ ಪೈಕಿ ಈತ 15ನೆಯವ.  ತಂದೆ ರೋಗಿಷ್ಟ ಹಾಗೂ ಕುಡುಕ.  ಕಲಷ್ನಿಕೋವ್‍ನ ಆರು ಜನ ಅಣ್ಣಂದಿರು ಜೂಜುಕೋರರು.  ಕಿತ್ತು ತಿನ್ನುವ ಬಡತನದಲ್ಲಿ ಜೂಜಿನಿಂದ ಬಂದ ಅಲ್ಪ ಸ್ವಲ್ಪ ಹಣದಿಂದ ಕಲಷ್ನಿಕೋವ್ ಪ್ರಾಥಮಿಕ ಶಿಕ್ಷಣ ಮುಗಿಸಿದ.  ಸಂಸಾರದ ಜವಾಬ್ದಾರಿಯೆಲ್ಲ ಕಲಷ್ನಿಕೋವ್ ಒಬ್ಬನೆ ಹೊರಬೇಕಾಯಿತು.  ಶಿಕ್ಷಣ ಮುಗಿದ ಮೇಲೆ ಟಕೆಸ್ಟಾನ್ ರೈಲ್ವೆಯಲ್ಲಿ ಗುಮಾಸ್ತನಾಗಿ ಕೆಲಸಕ್ಕೆ ಸೇರಿದ.  ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ದೃಢಕಾಯನಾಗಿದ್ದ ಕಲಷ್ನಿಕೋವ್‍ನನ್ನು ಯುದ್ಧಕ್ಕೆಂದು ಸೈನ್ಯದಲ್ಲಿ ಸೇರಿಸಿಕೊಳ್ಳಲಾಗಿತ್ತು.  ತನ್ನ ಚುರುಕುತನದಿಂದ ಬೇಗನೇ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾದ.  ಇದರಿಂದ ಸೇನೆಯ ಟ್ಯಾಂಕ್ ವಿಭಾಗಕ್ಕೆ ಬಡ್ತಿ ಪಡೆದ.  ಭೀಕರ ಯುದ್ಧ ಸಂದರ್ಭದಲ್ಲಿ ತಾನು ಕುಳಿತ ಟ್ಯಾಂಕ್‍ನಿಂದ ಎಷ್ಟು ಗುಂಡುಗಳು ಸಿಡಿದವು ಎಂಬುದರ ಲೆಕ್ಕ ಇಡುವ ಕಾರ್ಯವದು.  ಗುಂಡು ಹಾರಿಸುವುದನ್ನು ನೋಡುವುದು, ಬಂದೂಕಿನ ಸಹವಾಸ ಇದರಿಂದ ಹೆಚ್ಚಾಯಿತು.  ಹೀಗಿರುವಾಗ ರಷ್ಯಾ ಸೇನೆ ಸರ್ಬಿಯಾದ ಅಂಚಿನಲ್ಲಿ ಯುದ್ಧ ಕಣವನ್ನು ಹಾಸಿ ಸಮರಕ್ಕೆ ನಿಂತಾಗÀ ಕಲಷ್ನಿಕೋವ್ ಕಿವಿಗೆ ಗುಂಡಿನ ಮೊರೆತ.  ಹೀಗಿರುವಾಗ ಶತೃವಿಗೆ ಸಿಂಹಸ್ವಪ್ನವಾದ ಹಾಗೂ ಬಳಸಲು ಅತಿ ಶ್ರೇಷ್ಠ ಬಂದೂಕನ್ನು ತಾನೇಕೆ ನಿರ್ಮಿಸಬಾರದೆಂದು ಕಲಷ್ನಿಕೋವ್‍ಗೆ ಅನಿಸಿತು.  ಈ ವಿಚಾರ ಕುರಿತು ತನ್ನ ಮೇಲಧಿಕಾರಿಯಾದ ಮೇಧಾವಿ ಮಾರ್ಷಲ್ ಝಕೋವ್‍ನ ಮುಂದೆ ತನ್ನ ಆಸೆ ಹೇಳಿಕೊಂಡ.  ಆತ ತಡಮಾಡದೆ ಕಲಷ್ನಿಕೋವ್‍ನ ಬೆನ್ನು ತಟ್ಟಿದ.  ಅಷ್ಟರಲ್ಲೇ ಒಂದು ಘೋರ ಅನಾಹುತ ಸಂಭವಿಸಿತು.  ಈ ಘೋರ ಅನಾಹುತವೇ ಆತನ ದಿಕ್ಕನ್ನು ಹಾಗೂ ಜಗತ್ತಿನ ಯುದ್ಧದ ದಿಕ್ಕನೇ ಬದಲಿಸಿತು.
1943 ರ ಜನವರಿ 12 ರಂದು ಮುಂಜಾನೆ ಯುದ್ಧ ಭೂಮಿಯಲ್ಲಿ ಅಕಸ್ಮಾತ್ ಕಲಷ್ನಿಕೋವ್‍ನ ಕಾಲಿಗೆ ಶತೃವಿನ ಗುಂಡು ಬಡಿಯಿತು.  ಕಲಷ್ನಿಕೋವ್ ಆಸ್ಪತ್ರೆ ಸೇರಿ ಗುಣಮುಖನಾಗಿ ಹೊರ ಬಂದಾಗ ಹೇಳಿದ್ದೇನು ಗೊತ್ತೇ ?  “ಯಾರೇ ಬಂದೂಕಿನಿಂದ ಹೊಡೆದರೂ ಗುಂಡು ತಿಂದವನಿಗೆ ಗಾಯವಾಗಬಾರದು, ಆದರೆ ಆತ ಕ್ಷಣದಲ್ಲೇ ಸತ್ತೇ ಹೋಗಬೇಕು, ಆತನಿಗೆ ಚೀರಲೂ ಸಮಯವಿರಬಾರದು, ಅಂತಹ ಬಂದೂಕನ್ನು ನಾನೇ ತಯಾರಿಸುತ್ತೇನೆ ನೋಡುತ್ತಿರಿ” ಎಂದು ಶಪಥ ಮಾಡಿದ.  ನಿಜಕ್ಕೂ ಇದೊಂದು ಭೀಕರ ಶಪಥವಾಗಿ ಇತಿಹಾಸದ ಪುಟ ಸೇರಿತು.  ಆಸ್ಪತ್ರೆಯಿಂದ ಮನೆಗೆ ಬಂದವನೇ ಬಗೆ ಬಗೆಯ ಆಯುಧಗಳ ತಯಾರಿಕೆಗೆ ಸಂಬಂಧಿಸಿದಂತೆ ಹಲವಾರು ಪುಸ್ತಕಗಳನ್ನು ದಿನವಿಡೀ ಅಭ್ಯಸಿಸಿದ.  ಒಂದು ವಿಶಿಷ್ಟ ಆಯುಧದ ಬಗ್ಗೆ ಒಂದಷ್ಟು ಕಲ್ಪನೆಯುಂಟಾಯ್ತು.  ಸೋವಿಯತ್ ರಷಿಯಾದ ಬಳಿ ಹಾಗೂ ಜಗತ್ತಿನ ಇತರೆ ದೇಶಗಳ ಬಳಿ ಅಲ್ಲಿಯವರೆಗೆ ಇದ್ದ ಆಯುಧಗಳೆಲ್ಲ ಸಾಂಪ್ರದಾಯಿಕ ವಾದವುಗಳು.  ಶತೃಗಳ ಎದೆ ನಡುಗಿಸುವಂತಹ ಡೇಂಜರ್ ಡೆವಿಲ್ ಶಸ್ತ್ರ ಇರಲಿಲ್ಲ.  ಆಯುಧಗಳ ಬಗ್ಗೆ ಸಾಕಷ್ಟು ಓದಿ, ಅರಿತ ಕಲಷ್ನಿಕೋವ್ ತಾನು ತಯಾರಿಸುವ ಆಯುಧ ಹೇಗಿರಬೇಕೆಂಬುದರ ಬಗ್ಗೆ ಮನಸ್ಸಿನಲ್ಲೇ ಕಲ್ಪಿಸಿಕೊಂಡ.  ಈ ಸಂದರ್ಭದಲ್ಲಿ ಕಲಷ್ನಿಕೋವ್ ದೃಷ್ಟಿಯನ್ನು ಸೆಳೆದ ಆಯುಧ ಎಂದರೆ ಎಂ.ಇ. -44.  ಇದು ನಾಜಿ ಸೈನಿಕರು ಬಳಸಿದ ಆಯುಧ.  ಬಲು ಪರಿಣಾಮಕಾರಿ.  ತಾನು ತಯಾರಿಸುತ್ತಿರುವ ಆಯುಧ ಅದಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿರಬೇಕು.  ಅತಿ ಸುಲಭವಾಗಿ ಬಳಸಲು ಅನುವುವಾಗುವಂತರಿಬೇಕು.  ಏಕೆಂದರೆ ಯುದ್ಧದಲ್ಲಿ ಪ್ರತಿ ಕ್ಷಣವೂ ಅಮೂಲ್ಯವಾದದ್ದು.  ಸೈನಿಕ ಶ್ರಮ, ಸಮಯ ಹಾಳು ಮಾಡದೆ ಶತೃವನ್ನು ಕ್ಷಣಾರ್ಧದಲ್ಲೇ ನೆಲಕ್ಕುರುಳಿಸಬಲ್ಲ ಆಯುಧ ಕಂಡುಹಿಡಿಯಲೇಬೇಕೆಂದು ದೃಢವಾಗಿ ನಿಶ್ಚಯಿಸಿ, ಅದರ ಕಲ್ಪನೆಯಲ್ಲೇ ಮುಳುಗಿದ.  ಅಷ್ಟರಲ್ಲಿ ಯುದ್ಧ ಮುಗಿಯಿತು.  ಕಲಷ್ನಿಕೋವ್‍ನ ಮೇಲಧಿಕಾರಿಯಾದ ಝಕೋವ್‍ನ ಸಹಾಯದಿಂದ ಅಲ್ಮಲಾದಲ್ಲಿನ ಏವಿಯೇಷನ್ ಇನ್‍ಸ್ಟಿಟ್ಯೂಟ್‍ನಲ್ಲಿ ಹುದ್ದೆಯೊಂದು ಲಭಿಸಿತು.  ಅಲ್ಲಿಯೂ  ಕಲಷ್ನಿಕೋವ್‍ನ ಆಸಕ್ತಿ ಶಸ್ತ್ರಾಸ್ತ್ರ ವಿನ್ಯಾಸದಲ್ಲೇ ಕೇಂದ್ರೀಕೃತವಾಗಿತ್ತು.  ಆ ಇನ್‍ಸ್ಟಿಟ್ಯೂಟ್‍ನಲ್ಲಿದ್ದ ನಿಪುಣರೊಂದಿಗೆ, ಸೈನಿಕ ತಜ್ಞರೊಂದಿಗೆ ತನ್ನ ಆಲೋಚನೆಗಳನ್ನು ಹಂಚಿಕೊಳ್ಳುವ ಸದಾವಕಾಶ ದೊರೆಯಿತು.
ಕೆಲ ದಿನಗಳಲ್ಲಿಯೇ ಕಲಷ್ನಿಕೋವ್‍ನ ಕನಸು ನನಸಾಯಿತು.  ಆತ ವಿನ್ಯಾಸ ಮಾಡಿದ ರೈಫಲ್‍ನಲ್ಲಿ ಕಾರ್ಟಿಜ್ ತುಂಬಾ ಚಿಕ್ಕದು.  7.62 ಮಿ.ಮೀ. ನಷ್ಟಿದ್ದು, ಸೈನಿಕನೊಬ್ಬ ಸುಲಭವಾಗಿ ಹಿಡಿದುಕೊಳ್ಳುವಂತಿತ್ತು.  ಭಾರವೂ ಕಡಿಮೆ.  ಕೇವಲ 4.8 ಕೆ.ಜಿ. ಶೂಟಿಂಗ್ ರೇಂಜ್ (ಬಂದೂಕಿನ ಗುರಿ ದೂರ) ಸುಮಾರು 400 ಮೀ.ಗಳಷ್ಟು.  ಇವೆಲ್ಲದರಿಂದ ಕಲಷ್ನಿಕೋವ್‍ನ ಆಯುಧ ಅತ್ಯಂತ ಶಕ್ತಿಶಾಲಿ ಆಯುಧವಾಗಿ ಹೊರ ಹೊಮ್ಮಿತು.  ಎಲ್ಲಕ್ಕಿಂತಲೂ ಮುಖ್ಯವಾದುದು ಈ ರೈಫಲ್‍ನಲ್ಲಿ ಗ್ಯಾಸ್ ಆಪರೇಷನ್.  ಕಲಷ್ನಿಕೋವ್ ಈ ಆಯುಧದ ತಯಾರಿಕೆಯಲ್ಲಿ ಮಶಿನ್‍ಗನ್‍ನ  ತತ್ವವನ್ನು ಅಳವಡಿಸಿಕೊಂಡರೂ, ಸರಳ ತಂತ್ರಜ್ಞಾನದೊಂದಿಗೆ ಕೆಲಸ ಮಾಡುವಂತಹ ಆಯುಧ ಸಿದ್ಧಪಡಿಸಿದ.  ಈ ಆಯುಧದ ವೈಶಿಷ್ಟ್ಯವೆಂದರೆ ಒಂದು ಸುತ್ತು ಗುಂಡು ಹಾರಿಸುತ್ತಲೇ ಗ್ಯಾಸ್ ಹೊರಬಂದು ಆ ಗ್ಯಾಸ್‍ನ್ನು ಪಿಸ್ಟನ್ನಿನೊಳಗೆ ರೀ-ಸೈಕಲ್ ಮಾಡಿ ಮುಂದಿನ ಸುತ್ತಿಗೆ ಸಿಡಿಸಲು ಅನುವಾಗುವಂತೆ ಗುಂಡುಗಳು ತನ್ನಿಂತಾನೇ ಲೋಡ್ ಆಗುವುದು.
ಕಲಷ್ನಿಕೋವ್‍ನ ಈ ಹೊಸ ಆಯುಧವನ್ನು ನೋಡಿ ಸೋವಿಯತ್ ಮಿಲಿಟರಿ ಅಧಿಕಾರಿಗಳು ದಿಗ್ಭ್ರಾಂತರಾದರು.  ಕಂಕುಳಲ್ಲಿಟ್ಟುಕೊಂಡು ಪರೀಕ್ಷಾರ್ಥ ಗುಂಡು ಹಾರಿಸದರೆ 800 ಮೀಟರ್ ದೂರದಲ್ಲಿದ್ದ ಇಟ್ಟಿಗೆ ಕಲ್ಲು ಚೂರು ಚೂರಾಗಿತ್ತು.  ಮೇಲಧಿಕಾರಿಗಳು ಕಲಷ್ನಿಕೋವ್‍ನನ್ನು ಬಿಗಿದಪ್ಪಿ “ನೀನು ಜಗತ್ತಿನ ಯುದ್ಧದ ಚಿತ್ರಣವನ್ನು ಬದಲಾಯಿಸಿ ಬಿಟ್ಟೆ, ಶತೃಗಳನ್ನು ಕೊಲ್ಲುವ ಕಾಯಕವನ್ನು ಸುಲಭ ಮಾಡಿಬಿಟ್ಟೆ” ಎಂದು ಹರ್ಷೋದ್ಘಾರ ತೆಗೆದರು.  ಇದಾದ ನಂತರದ ದಿನಗಳಲ್ಲಿ ಕಲಷ್ನಿಕೋವ್ ತನ್ನ ಹೆಸರಿನ 7.62 ಎಂ.ಎಂ. ರೈಫಲ್, ಎಕೆಎಂ, ಎಕೆಂಎಸ್, ಎಕೆ-47, ಎಕೆಎಸ್-74, ಪಿಕೆ, ಪಿಕೆಎಸ್ ಹೀಗೆ ಮುಂತಾದ ನಮೂನೆ ಬಂದೂಕನ್ನು ತಯಾರಿಸಿದ.  ಎಕೆ-47 ಬಂದೂಕು ಹಿಡಿಯಲು ಕೈಲಾಗದ ಹುಡುಗನೂ ಎರಡೇ ಎರಡು ನಿಮಿಷದಲ್ಲಿ ಅದನ್ನು ಬಳಸಲು ಕಲಿಯಬಹುದಿತ್ತು.  ಯುದ್ಧ ಭೂಮಿ ಇರಲಿ, ಮರುಭೂಮಿ ಇರಲಿ, ಸಮುದ್ರ, ಹಿಮಕೊಳ್ಳ, ದಟ್ಟ ಅರಣ್ಯ ಹೀಗೆ ಎಲ್ಲಿ ಬೇಕಾದರಲ್ಲಿ ಈ ಆಯುಧವನ್ನು ಸರಳವಾಗಿ ಒಯ್ಯಬಹುದಾಗಿತ್ತು,
ಉಪಯೋಗಿಸಬಹುದಾಗಿತ್ತು.  ಅದನ್ನು ಬಳಸುವ ತಂತ್ರವೂ ಸುಲಭ.  ಕಣ್ಣುಮುಚ್ಚಿ ತೆರೆಯುವುದರೊಳಗಾಗಿ  ಗುಂಡಿನ ಮಳೆ ಸುರಿಸಿ ಎದುರಿಗಿರುವ ಎಲ್ಲರನ್ನೂ ಬೀಳಿಸಬಹುದಾಗಿತ್ತು.  ಗುಂಡುಗಳು ತನ್ನಿಂತಾನೇ ತುಂಬಿಕೊಳ್ಳುವ ಸೌಲಭ್ಯ ಬೇರೆ.  ಯಾವ ಅಳತೆಗೋಲಿನಿಂದ ಅಳೆದರೂ ಕಲಷ್ನಿಕೋವ್‍ನ ಆಯುಧ ಪರಿಪೂರ್ಣತೆಯನ್ನು ಹೊಂದಿತ್ತು.  ಇಡೀ ವಿಶ್ವದಲ್ಲಿಯೇ ಅತ್ಯಂತ ಭಯಾನಕ ಆಯುಧವನ್ನು ತಯಾರು ಮಾಡಿದವನ ಗೌರವಾರ್ಥ ಈ ಬಂದೂಕಿಗೆ ಎಕೆ-47 ಎಂದು ನಾಮಕರಣ ಮಾಡಲಾಯಿತು.  `ಎ’ ಎಂದರೆ  ಅವಟೋಮಾನ್,  `ಕೆ’ ಎಂದರೆ ಕಲಷ್ನಿಕೋವ್,  `47′ ಅಂದರೆ 1947 ರಲ್ಲಿ ಸಿದ್ಧಪಡಿಸಿದ್ದರ ಸೂಚಕವಾಗಿ `47′ ಎಂಬ ಎರಡಂಕಿ ಬಳಸಿಕೊಳ್ಳಲಾಯಿತು.
ಆಗಿನ ಪ್ರಸಿದ್ಧ ಶಸ್ತ್ರ ತಯಾರಿಕಾ ಕಂಪನಿಯಾದ `ಇಜ್ಮಾಷ್’ ಕಲಷ್ನಿಕೋವ್‍ನ ಆಯುಧವನ್ನು ತಯಾರಿಸುವ ಹೊಣೆ ಹೊತ್ತು ಕೊಂಡಿತು.   ಈ ಸುದ್ದಿ ತುಂಬಾ ಗುಟ್ಟಾಗಿಡಲಾಗಿತ್ತು.  ಬೆಳಗಾಗುವುದರಲ್ಲಿ ಕಲಷ್ನಿಕೋವ್ `ಟಾಪ್ ಆರ್ಮ್ ಡಿಸೈನರ್ (ಪ್ರಮುಖ ಶಸ್ತ್ರ ವಿನ್ಯಾಸಕಾರ)’ ಎಂಬ ಖ್ಯಾತಿಗೆ ಒಳಗಾದ.  ಈ ಸಂದರ್ಭದಲ್ಲಿ ಮೂರು ವರ್ಷಗಳವರೆಗೆ ಕಲಷ್ನಿಕೋವ್‍ನನ್ನು ರಷಿಯಾ ದೇಶ ರಹಸ್ಯ ತಾಣದಲ್ಲಿಟ್ಟಿತ್ತು.  ಆತನ ಕುಟುಂಬದ ಸದಸ್ಯರಿಗೂ ಭೇಟಿ ನಿರಾಕರಿಸಿತ್ತು.  ಸೋವಿಯತ್ ರಷ್ಯಾ ಈ ವಿಷಯ ಎಷ್ಟೇ ಗುಟ್ಟಾಗಿಟ್ಟರೂ ರಷ್ಯಾ ಹೊಸದೊಂದು ಆಯುಧ ತಯಾರಿಸಿದ ಸುದ್ದಿ ಗೊತ್ತಾಗತೊಡಗಿತು.  ಈ ಸುದ್ದಿ ಕೇಳಿ ಹಲವಾರು ದೇಶಗಳ ಸೈನಿಕ ಶಿಬಿರಗಳಲ್ಲಿ ತೀವ್ರ ಸಂಚಲನೆವುಂಟಾಯಿತು.  ಎಕೆ-47 ನ ವಿನ್ಯಾಸ ಪಡೆಯಲು ಅಮೆರಿಕ ಗೂಢಚಾರರು ಅಲೆ ಬೀಸದಿರು.  ಬರಬರುತ್ತಾ ಎಕೆ-47 ಅನ್ನು ಹೋಲುವಂತಹ ಆಯುಧಗಳ ತಯಾರಿಕೆಯ ಯತ್ನ ತೆರೆಮರೆಯಲ್ಲಿ ಆರಂಭವಾಯಿತು.  ಸೋವಿಯತ್ ರಷ್ಯಾ ತನ್ನ ಮಿತ್ರ ದೇಶಗಳಿಗೆ `ಯುದ್ಧದ ಕಾಣಿಕೆ’ (ಪ್ರೆಸೆಂಟೇಷನ್ ಆಫ್ ದಿ ವಾರ್) ಎಂಬುದಾಗಿ ಎಕೆ-47 ಬಂದೂಕುಗಳನ್ನು  ನೀಡಲಾರಂಭಿಸಿತು.  ಆವಾಗಲೇ ಇಡೀ ಜಗತ್ತಿಗೆ ಇದರ ರುದ್ರರೂಪದ ದರ್ಶನವಾಯಿತು.  ನಿಧಾನವಾಗಿ ಎಕೆ-47 ತಂತ್ರಜ್ಞಾನ ಫಿನ್‍ಲ್ಯಾಂಡ್, ಉತ್ತರ ಕೊರಿಯಾ, ಚೀನಾ ದೇಶಗಳಿಗೆ ಲಭ್ಯವಾಯಿತು.  ಎಕೆ-47 ಕಂಡುಹಿಡಿದ ಎರಡು ವರ್ಷಗಳ ಬಳಿಕ ಅಂದರೆ 1949 ರಲ್ಲಿ ಸೋವಿಯತ್ ಸರ್ಕಾರದಿಂದ ಪ್ರತಿಷ್ಠಿತ ಪ್ರಶಸ್ತಿಯಾದ `ಸ್ಟಾಲಿನ್’ ಪ್ರಶಸ್ತಿ ಕಲಷ್ನಿಕೋವ್‍ಗೆ ದೊರೆಯಿತು.
ನೆನಪಿರಲಿ, ಎಕೆ-47 ಬಂದೂಕು ಕಂಡುಹಿಡಿದ ಹಿಂದಿನ ಉದ್ದೇಶ ರಕ್ತಪಾತವಾಗಿರಲಿಲ್ಲ.  ತನ್ನ ದೇಶದ ಸ್ವಾಭಿಮಾನದ ಸಂಕೇತವಾಗಿ ಶತೃಗಳನ್ನು ಭಯ-ಭೀತಿಗೊಳಿಸುವುದೇ ಈತನ ಉದ್ದೇಶವಾಗಿತ್ತು.  ಅದೇ ದೀಕ್ಷೆಯಿಂದ ತನ್ನ ಎಕೆ-47 ಅನ್ನು ಮತ್ತಷ್ಟು ಆಧುನೀಕರಣಗೊಳಿಸಿದ.  ಇದರಿಂದ ಹಲವು ಪ್ರಬಲ ಆಯುಧಗಳನ್ನು ತಯಾರಿಸುವಲ್ಲಿ ಯಶಸ್ವಿಯಾದ.  ಅವೆಲ್ಲವೂ `ಕಲಷ್ನಿಕೋವ್ ಫ್ಯಾಮಿಲಿ ಆಫ್ ವೆಪನ್ಸ್’ ಎಂಬುದಾಗಿ ಮಿಲಿಟರಿ ವಲಯದಲ್ಲಿ ಹೆಸರು ಪಡೆದುಕೊಂಡಿದೆ.
ಅಪರಾಧಿ ಪ್ರಜ್ಞೆಯಲ್ಲಿ ಕಲಷ್ನಿಕೋವ್
ಮಿಖಾಯಿಲ್ ಕಲಷ್ನಿಕೋವ್ ಮನೋರೋಗಿಯಾಗಿ ಅಪರಾಧಿ ಭಾವನೆಯಿಂದ ನಲುಗಿ ಹೋಗಿದ್ದನು.  1992 ರಲ್ಲಿ ನಗರ್ನೊ ಕರಬತ್‍ನಲ್ಲಿ ಅಜರ್‍ಬೈಜರ್‍ನ ಹೆಣ್ಣುಮಕ್ಕಳನ್ನು ಬೆನ್ನುಹತ್ತಿ ಅತ್ಯಾಚಾರ ಮಾಡಿ ಅವರ ಹಣೆಗೆ ಎಕೆ-47 ಬಂದೂಕನ್ನಿಟ್ಟು ನಿಷ್ಕರುಣೆಯಿಂದ, ನಿರ್ದಯದಿಂದ ಜೀವ ತೆಗೆದ ಕರುಣಾಜನಕ ಚಿತ್ರಣ ಆತನ ಮನಸ್ಸಿನಲ್ಲಿ ಆಳವಾಗಿ ನಾಟಿತ್ತು.  ಬಂದೂಕಿನ ಸದ್ದು ದೂರದಲ್ಲೆಲ್ಲೋ ಕೇಳಿದರೆ ಸಾಕು ಆತ ಕುಳಿತಲ್ಲೆ ಮೂರ್ಛೆ ಬೀಳುತ್ತಿದ್ದನು.  ವಾರಗಟ್ಟಲೆ ಮೈ ಮೇಲೆ ಎಚ್ಚರವಿರುತ್ತಿರಲಿಲ್ಲ.  ಕಣ್ಣು ಬಿಟ್ಟಾಗ ಬಂದೂಕು ಕಂಡರೆ ಹುಚ್ಚನಂತೆ ವರ್ತಿಸುತ್ತಿದ್ದನು. ಹಲವು ದಿನಗಳವರೆಗೆ ಅನ್ನ-ನೀರು ಸೇವಿಸದೆ ದಿನಗಟ್ಟಲೆ ರೂಮಿನಲ್ಲಿ ಒಬ್ಬನೇ ಬಂಧಿಯಾಗಿರುತ್ತಿದ್ದನು.
ವಿನಾಶಕಾರಿ ಹಾದಿಯಲ್ಲಿ ಎಕೆ-47
“ವಿಜ್ಞಾನ ಎರಡಲುಗಿನ ಕತ್ತಿ” ಎಂಬ ಮಾತು ನಿಜಕ್ಕೂ ಘೋರ ಸತ್ಯ.  ಅಣುವನ್ನು ಒಡೆದು ಅಪಾರ ಶಕ್ತಿಯನ್ನು ಪಡೆಯಬಹುದು.  ಅದೇ ಅಣುವನ್ನು ಭೇದಿಸಿ ಅಣ್ವಸ್ತ್ರ ರೂಪಿಸಿ, ಅಪಾರ ಹಾನಿಯನ್ನುಂಟು ಮಾಡಬಹುದು.  “ಆಯುಧಗಳೆಲ್ಲವೂ ಮುಗ್ಧವಾದವು, ಅವನ್ನು ಬಳಸುವವರೇ ವಿನಾಶಕರ್ತರು” ಎಂದು ಮಹತ್ಮಾ ಗಾಂಧೀಜಿ ಹೇಳಿದ್ದು ಮಾರ್ಮಿಕವಾಗಿದೆ.  ಈ ಮಾತು ಎಕೆ-47 ಬಂದೂಕಿಗೂ ಅನ್ವಯಿಸುತ್ತದೆ.
ಇಲ್ಲಿ ಅಲ್‍ಫ್ರೆಡ್ ನೊಬೆಲ್‍ನ ಹೆಸರು ಪ್ರಸ್ತಾಪಿಸುವುದು ಸೂಕ್ತ.  ಏಕೆಂದರೆ ತಾನು ಕಂಡುಹಿಡಿದ ಡೈನಾಮಿಟ್‍ನ ಹಿಂದಿನ ಉದ್ದೇಶ ಶಾಂತಿ ಸ್ಥಾಪಿಸುವುದೇ ಆಗಿತ್ತು.  ಆದರೆ ಸ್ವಾರ್ಥ ಜನರು ಅದನ್ನು ಬಾಂಬ್ ತರಹ ಜನರ ಮಧ್ಯೆ ಸ್ಫೋಟಿಸವುದನ್ನು ಕಣ್ಣಾರೆ ಕಂಡು ಮಮ್ಮಲ ಮರುಗಿದ.  ಒಂದು ದಿನ ಭಯಾನಕ ಸ್ಫೋಟಕ ಡೈನಾಮೆಟ್‍ನ್ನು ಕಂಡುಹಿಡಿದ ನೊಬೆಲ್ ಸತ್ತಿದ್ದಾನೆಂದು ಪತ್ರಿಕೆಯೊಂದು ವರದಿ ಮಾಡಿತು.  ಅದರೆ ನಿಜವಾಗಿ ಆತ ಸತ್ತಿರಲಿಲ್ಲ.  ತನ್ನ ಸಾವಿನ ಸುದ್ದಿಯನ್ನು ತಾನೇ ಓದಬೇಕಾದ ಪ್ರಸಂಗ.  ಆ ಸುದ್ದಿಗೆ “ದಿ ಮರ್ಚೆಂಟ್ ಆಫ್ ಡೆತ್ ನೋ ಮೋರ್” (ಸಾವಿನ ವ್ಯಾಪಾರಿ ನಿಧನ) ಎಂದು ಶೀರ್ಷಿಕೆ ನೀಡಲಾಗಿತ್ತು.  ಇದನ್ನು ಓದಿದ ನೊಬೆಲ್ ಧರೆಗಿಳಿದು ಹೋದ.  ತಾನು ಸತ್ತ ನಂತರ ಜನರು ತನ್ನನ್ನು “ಸಾವಿನ ವ್ಯಾಪಾರಿ” ಎಂದು ನೆನಪಿಟ್ಟುಕೊಳ್ಳುತ್ತಾರೆಂಬ ಕೊರಗು ಕಾಡಲಾರಂಭಿಸಿತು.  ಕೊನೆಗಾದರೂ ನನ್ನನ್ನು ಒಳ್ಳೆಯ ಭಾವನೆಯಿಂದ ಜನ ನೆನಪಿಸಿಕೊಳ್ಳಲಿ ಎಂಬ ಉದ್ದೇಶದಿಂದ ತನ್ನ ಕೋಟ್ಯಾಂತರ ಡಾಲರ್ ಹಣದಿಂದ `ನೊಬೆಲ್ ಪ್ರಶಸ್ತಿ’ ಸ್ಥಾಪಿಸಿದ.  ಈ ಮೂಲಕ ಇತಿಹಾಸದ ಪುಟಗಳಲ್ಲಿ ತನಗೊಂದು ಉತ್ತಮ ಶಾಶ್ವತ ಸ್ಥಾನವೊಂದನ್ನು ಪಡೆದುಕೊಂಡ.
ಎಂಟು ವರ್ಷಗಳ ಹಿಂದೆ 1997 ರಲ್ಲಿ ದೆಹಲಿಯಲ್ಲಿ ನಡೆದ ರಕ್ಷಣಾ ಶಸ್ತ್ರಗಳ ಪ್ರದರ್ಶನಕ್ಕೆ ಕಲಷ್ನಿಕೋವ್ ಭಾರತಕ್ಕೆ ಬಂದಿದ್ದ.  ರಷ್ಯಾ ಸಂಸತ್ ಸದಸ್ಯನಾಗಿ (ಡೆಪ್ಯೂಟಿ ಇನ್ ದಿ ಸೋವಿಯತ್ ಪಾರ್ಲಿಮೆಂಟ್) 30 ವರ್ಷದ ಅನುಭವವಿದೆ ಕಲಷ್ನಿಕೋವ್‍ಗೆ.  ಕಲಷ್ನಿಕೋವ್ ಒಬ್ಬ ಭಾರಿ ಕೋಟ್ಯಾಧಿಪತಿ ಎಂದು ನೀವು ಊಹಿಸಿದ್ದರೆ ನಿಮ್ಮ ಊಹೆ ತಪ್ಪು.  ಎಕೆ-47 ಬಂದೂಕಿನ ಸೃಷ್ಟಿಕರ್ತನಾಗಿದ್ದಕ್ಕಾಗಿ ಮಾರಾಟವಾಗುವ ಪ್ರತಿಯೊಂದು ಬಂದೂಕಿನ ಮೇಲೂ ಕಲಷ್ನಿಕೋವ್‍ಗೆ ರಾಯಧನ ಲಭಿಸಬೇಕು.  ಆ ಲೆಕ್ಕದಂತೆ ಕಲಷ್ನಿಕೋವ್‍ಗೆ ಎಷ್ಟು ರಾಯಧನ ಲಭಿಸಿರಬಹುದೆನ್ನುತ್ತೀರಿ ?  ಇಲ್ಲ ! ಆ ಮೊತ್ತವನ್ನು ನೀವು ಊಹಿಸಲೂ ಸಾಧ್ಯವಿಲ್ಲ.  ಏಕೆಂದರೆ ಆ ಮೊತ್ತ ಒಂದು ಬಂದೂಕಿಗೆ ಕೇವಲ ಒಂದು ರೂಪಾಯಿ, ಮೂವತ್ತೈದು ಪೈಸೆ ಮಾತ್ರ.  ಅಚ್ಚರಿಯಾದರೂ ಇದು ಕಟು ಸತ್ಯ.  ಇಷ್ಟೆಲ್ಲಾ ಖ್ಯಾತಿ ಗಳಿಸಿದ್ದರೂ ರಷ್ಯನ್ ಸರ್ಕಾರದ ದೃಷ್ಟಿಯಲ್ಲಿ ಕಲಷ್ನಿಕೋವ್ ಒಬ್ಬ ಸಾಧಾರಣ ನೌಕರ ಎಂದು ಪರಿಗಣಿತನಾಗಿದ್ದಾನೆ.  ಇತ್ತೀಚಿನವರೆಗೂ ವಾಸಕ್ಕೊಂದು ಸ್ವಂತ ಮನೆ ರಷ್ಯಾ ಸರ್ಕಾರ ನೀಡಿರಲಿಲ್ಲ.  ಗೆಳೆಯನೊಬ್ಬನ ಸಹಾಯದಿಂದ ಸರ್ಕಾರದಿಂದ ಸ್ವಂತ ಮನೆ ಮಂಜೂರಾಯಿತಂತೆ.  ಅದೂ ಸಹ ಕಟ್ಟಿಗೆ ಮನೆಯಂತೆ !
ಇಲ್ಲಿಯವರೆಗೆ ತಾಂತ್ರಿಕವಾಗಿ ಮನುಷ್ಯ ಸಾಕಷ್ಟು ಅಭಿವೃದ್ಧಿ ಸಾಧಿಸಿದ್ದಾನೆ.  ಆದರೂ ಎಕೆ-47 ಅನ್ನು ಮೀರಿಸುವುದರಿಲಿ, ಅದಕ್ಕೆ ಸರಿಸಮಾನವಾದಂತಹ ಆಯುಧ ಸೃಷ್ಟಿಯಾಗದಿರುವುದು ಅತಿಶಯೋಕ್ತಿಯಾದರೂ ಕಟು ಸತ್ಯ.  ಎಕೆ-47 ಬಂದೂ ಉತ್ಪಾದನೆಯಾದ ನಂತರ ಎಕೆ-52,  ಎಕೆ-56,  ಎಕೆ-72 ಬಂದೂಕುಗಳು ಸೃಷ್ಟಿಯಾದರೂ ಎಕೆ-47 ಬಂದೂಕಿಗೆ ಸರಿಸಮನಾಗಿ ನಿಲ್ಲಲಿಲ್ಲ.  ಎಕೆ-47ಗೆ ಎಕೆ-47 ಸರಿ ಸಾಟಿ.
ಇಂದು ವಿಶ್ವದೆಲ್ಲೆಡೆ ಜರುಗುವ ಹಿಂಸಾಚಾರದಲ್ಲಿ ಎಕೆ-47 ಬಂದೂಕಿನ ವಾಸನೆ ಇದ್ದೇ ಇರುತ್ತದೆ.  ತನ್ನ ಬಂದೂಕಿನ ಮೂಲಕ ಮುಗ್ಧಜನರ ಮಾರಣ ಹೋಮ ಕಂಡು ಕಲಷ್ನಿಕೋವ್‍ನ ಮನಸ್ಸು ಅದೆಷ್ಟು ಬೆಂದಿರಬೇಡ ನೀವೇ ಯೋಚಿಸಿ. (ಕೃಪೆ)

Leave a Comment