ಆತ್ಮಹತ್ಯೆ ಬೇಡ

ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷಾ ಫಲಿತಾಂಶಗಳು ಬಂದ ಬೆನ್ನಲ್ಲೇ ಅನುತ್ತೀರ್ಣರಾದ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಆತ್ಮಹತ್ಯೆ ಪ್ರಕರಣಗಳು ದಿನಕ್ಕೊಂದು ವರದಿಯಾಗುತ್ತಲೇ ಇವೆ. ದುರ್ಬಲ ಮನಸ್ಸಿನ  ಭವಿಷ್ಯದ ಕುಡಿಗಳು ಹೀಗೆ ಏಕಾಏಕಿ ಸಾವಿನ ಹಾದಿ ತುಳಿಯುವುದು ಸರಿಯಲ್ಲ.  ಯಾವುದೇ ವಿಷಯದಲ್ಲಿ ಕಡಿಮೆ ಅಂಕ ಬರಲಿ, ಇಲ್ಲವೇ ನಪಾಸಾಗಲೀ ಅದಕ್ಕೆ ಸಾವು ಮದ್ದಲ್ಲ. ಇದ್ದು ಸಾಧಿಸಬೇಕು. ಮಕ್ಕಳ ದುಡುಕು ನಿರ್ಧಾರದಿಂದ ತಮ್ಮ ಮಕ್ಕಳ ಮೇಲೆ ಹತ್ತಾರು ಕನಸುಗಳನ್ನು ಹೊತ್ತ ಪೋಷಕರ ಕನಸುಗಳು ಕನಸಾಗಿಯೇ ಉಳಿದುಬಿಡುತ್ತವೆ. ಕೊನೆವರೆಗೂ ಅವರಿಗೆ ಈ ಶೋಕ ಅರಗಿಸಿಕೊಳ್ಳಲಾಗದು.  ಇದು ಒಂದು  ರೀತಿ ವಿದ್ಯಾರ್ಥಿಗಳ ತಪ್ಪಾದರೆ ಮತ್ತೊಂದೆಡೆ ಅವರ ಆತ್ಮಹತ್ಯೆಗೆ ಪೋಷಕರೂ ಕಾರಣರಾಗುತ್ತಿದ್ದಾರೆ.  ಪ್ರತಿ ಪೋಷಕರು ತಮ್ಮ ಮಕ್ಕಳು ಅತಿ ಹೆಚ್ಚು ಅಂಕ ಗಳಿಸಬೇಕು, ಪ್ರಥಮ ರ್ಯಾಂಕ್ ಬರಬೇಕು ಎಂದು ಬಯಸಿದರೆ ಅದು ಸಾಧ್ಯವೇ ? ದಿನನಿತ್ಯ ಪೋಷಕರ ಒತ್ತಡದಿಂದ ಮಕ್ಕಳು ಶಾಶ್ವತವಾಗಿ ದೂರವಾದರೆ ಆಮೇಲೆ ಪಶ್ಚಾತ್ತಾಪ ಪಟ್ಟು ಪ್ರಯೋಜನವಿಲ್ಲ.  ವಿದ್ಯಾರ್ಥಿ ಜೀವನದಲ್ಲಿ ಸೋಲುಂಡು ತಮ್ಮ ಪ್ರತಿಭೆಯಿಂದ ವಿಶ್ವದಲ್ಲೇ ಹೆಸರು ಮಾಡಿದ ಅನೇಕರಿದ್ದಾರೆಂಬ ಸತ್ಯವನ್ನು ಪೋಷಕರು ಮಕ್ಕಳಿಗೆ ಮನದಟ್ಟು ಮಾಡಿಕೊಡುವ ಅವಶ್ಯಕತೆ ಇದೆ.  ಪೋಷಕರು ತಮ್ಮ ಮಕ್ಕಳನ್ನು ಅಂಕಗಳಿಂದ ಅಳೆಯುವುದನ್ನು ಬಿಡದಿದ್ದರೆ ಅಂಕೆಗೂ ಮೀರಿದ ಮಕ್ಕಳನ್ನು ಶಾಶ್ವತವಾಗಿ ಕಳೆದುಕೊಳ್ಳಬೇಕಾಗುತ್ತದೆ. – ಸಂ.

Leave a Comment